ಮಂಗಳೂರು : ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಹೆಸರಾಂತ ರಿಯಲ್ ಎಸ್ಟೇಟ್ ಸಂಸ್ಥೆ ‘ಲ್ಯಾಂಡ್ ಲಿಂಕ್ಸ್’ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ನಿರ್ಮಿಸಿರುವ ವಿನೂತನ ನಾಲ್ಕು ಅತ್ಯಾಧುನಿಕ ಸಭಾಭವನಗಳನ್ನು ಮಂಗಳೂರಿನ ಮೇರಿಹಿಲ್ ನಲ್ಲಿರುವ ಪಾಲೆಮಾರ್ ಕನ್ವೆನ್ಶನ್ ಸೆಂಟರ್ ನ ಲ್ಲಿ ಏಕಕಾಲಕ್ಕೆ ಉದ್ಘಾಟಿಸಿ ಮಾತನಾಡಿದ ಆಂಧ್ರ ಪ್ರದೇಶದ ರಾಜ್ಯಪಾಲ ನ್ಯಾ. ಎಸ್.ಅಬ್ದುಲ್ ನಝೀರ್ ರವರು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ನೇತೃತ್ವದಲ್ಲಿ ನಿರ್ಮಾಣವಾದ ಸಭಾಂಗಣ ಸಮುದಾಯದ ಶಿಕ್ಷಣ, ಸಂಸ್ಕೃತಿ, ಸಾಮಾಜಿಕ, ಸೌಹಾರ್ದ ಚಟುವಟಿಕೆಗಳಿಗೆ ಬಳಕೆಯಾಗಲಿ ಎಂದು ಶುಭ ಹಾರೈಸಿದ್ದಾರೆ.

ಮೇರಿಹಿಲ್ ನಲ್ಲಿ ಪಾಲೆಮಾರ್ ಕನ್ವೆನ್ಶನ್ ಸೆಂಟರ್, ಮೊರ್ಗನ್ಸ್ ಗೇಟ್ ನಲ್ಲಿ ಪಾಲೆಮಾರ್ ಗಾರ್ಡನ್, ಸುರತ್ಕಲ್ ನಲ್ಲಿ ಪಾಲೆಮಾರ್ ಫಾರ್ಮ್ಸ್ ಹಾಗೂ ಜೆಪ್ಪಿನಮೊಗರವಿನ ಕಡೆಕಾರ್ ನಲ್ಲಿ ನೇತ್ರಾವತಿ ಸಭಾಭವನಗಳು ಇಂದು ಏಕ ಕಾಲಕ್ಕೆ ಲೋಕಾರ್ಪಣೆಗೊಂಡವು.

ಮಾತು ಮುಂದುವರಿಸಿದ ನ್ಯಾ. ಎಸ್.ಅಬ್ದುಲ್ ನಝೀರ್, ಶಿಕ್ಷಣ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸಲು ಪೂರಕ. ಶಿಕ್ಷಣ ಬಡತನ ನಿರ್ಮೂಲನೆ ಮಾಡಲು ಪ್ರಮುಖ ಸಾಧನ. ಕೃಷ್ಣ ಪಾಲೆಮಾರ್ ಈ ನಿಟ್ಟಿನಲ್ಲಿ ಮಹತ್ವದ ಕೊಡುಗೆ ನೀಡಿದವರು. ಹಲವಾರು ಸಮಾಜಮುಖಿ ಕೆಲಸಗಳ ಮೂಲಕ ಜನರಿಗೆ ಶಿಕ್ಷಣ, ಉದ್ಯೋಗ ನೀಡಿದ್ದಾರೆ. ವಿಕಾಸ್ ಎಜುಕೇಶನ್ ಟ್ರಸ್ಟ್ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ನೀಡುತ್ತಿರುವುದು ಮಹತ್ವದ ಕಾರ್ಯ ಎಂದು ಶ್ಲಾಘಿಸಿದರು. ಮಂಗಳೂರು ಜನತೆಯ ಮದುವೆ, ಮಂಗಳ ಕಾರ್ಯಕ್ರಮಗಳು ಹಾಗೂ ಉತ್ತಮ ಕಾರ್ಯಗಳಿಗೆ ಪಾಲೆಮಾರ್ ಸಮೂಹದ ಸಭಾಂಗಣಗಳು ಬಳಕೆಯಾಗಲಿ ಎಂದು ಶುಭ ಹಾರೈಸಿದರು.

ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಮಾತನಾಡಿ, ಏಕ ವ್ಯಕ್ತಿ ತನ್ನ ಪರಿಶ್ರಮದಿಂದ ಸಂಪಾದಿಸಿದ ಸಂಪತ್ತನ್ನು ಸಮಾಜಮುಖಿಯಾಗಿ ವಿನಿಯೋಗಿಸುವ ಕೃಷ್ಣ ಜೆ. ಪಾಲೆಮಾರ್ ಚಿಂತನೆಗೆ ಅಭಿನಂದನೆಗಳು. ಎಲ್ಲರನ್ನು ಜೊತೆಯಾಗಿಸಿಕೊಂಡು ರಾಜ್ಯಕ್ಕೆ, ರಾಷ್ಟ್ರಕ್ಕೆ ಶಕ್ತಿ ತುಂಬುವ ಕೆಲಸ ಅವರಿಂದ ಆಗಿದೆ. ಹಲವಾರು ಸಮಾಜಮುಖಿ ಚಿಂತನೆಯಿಂದ ನಾಲ್ಕು ಸಭಾಭವನಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ ಪಾಲೆಮಾರ್ ಕೋಟಿಗೊಬ್ಬ ಎನ್ನಬಹುದು ಎಂದು ಶ್ಲಾಘಿಸಿದರು.

ಮುಂದಿನ ಒಂದು ತಿಂಗಳೊಳಗೆ ವಂದೇ ಭಾರತ್ ರೈಲು ಬೆಂಗಳೂರು-ಮಂಗಳೂರು ನಡುವೆ ಓಡಲಿದೆ. ಕೊಂಕಣ ರೈಲು ದೇಶದ ಗ್ರೋತ್ ಇಂಜಿನ್ ಆಗಿದೆ. ದೇಶದ ವ್ಯವಸ್ಥೆಯಲ್ಲಿ ರೈಲ್ವೆ ವಿಭಾಗ ದೇಶದ ಗ್ರೋತ್ ಇಂಜಿನ್ ಆಗಿ ಕಾರ್ಯನಿರ್ವಹಿಸುವಲ್ಲಿ ಪ್ರಧಾನ ಮಂತ್ರಿಯವರ ಪಾತ್ರ ಹಿರಿದಾಗಿದೆ. ಪ್ರಧಾನಿಯವರು ಮಂಗಳೂರನ್ನು ಕಡೆಗಣಿಸುವುದಿಲ್ಲ ಎಂದು ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಹಾಗೂ ವಿಕಾಸ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ, ವಿಕಾಸ ಎಜುಕೇಶನ್ ಟ್ರಸ್ಟ್ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತದೆ. ಈ ಸಭಾಂಗಣದಲ್ಲಿ ಬಂದ ಆದಾಯದ ಹೆಚ್ಚಿನ ಪಾಲು ಶಿಕ್ಷಣಕ್ಕಾಗಿ ಬಳಕೆಯಾಗಲಿದೆ ಎಂದರು. ಕಡಿಮೆ ದರದಲ್ಲಿ ಜನಸಾಮಾನ್ಯರಿಗೂ ಅನುಕೂಲವಾಗುವಂತೆ ಇದನ್ನು ನಿರ್ಮಿಸಲಾಗಿದೆ. ವಾಹನ ಪಾರ್ಕಿಂಗ್ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ನಾಲ್ಕೂ ಸಭಾಭವನಗಳಲ್ಲಿ ಅತ್ಯಂತ ವಿಶಾಲವಾದ, ವ್ಯವಸ್ಥಿತವಾದ ಪಾರ್ಕಿಂಗ್ ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ. ಬಡವ-ಬಲ್ಲಿದನೆಂಬ ಭೇದವಿಲ್ಲ. ಪ್ರತಿಯೊಬ್ಬರ ಆರ್ಥಿಕ ಶಕ್ತಿಗೆ ತಕ್ಕಂತೆ ಇಲ್ಲಿ ಸಭಾಂಗಣಗಳು ಲಭ್ಯವಿವೆ. ಎಲ್ಲ ವರ್ಗದ ಜನರಿಗೂ ಕೈಗೆಟಕುವ ದರದ ಸಭಾಂಗಣಗಳನ್ನು ಇಲ್ಲಿ ರೂಪಿಸಲಾಗಿದೆ ಎಂದು ಹೇಳಿದರು.

ಸರ್ವಧರ್ಮ ಸಮನ್ವಯ, ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದೇ ಎಲ್ಲ ಧರ್ಮ, ಜಾತಿ, ಸಮುದಾಯ ಹಾಗೂ ಎಲ್ಲಾ ಆರ್ಥಿಕ ಹಂತದ ಕುಟುಂಬಗಳಿಗೆ ಇಲ್ಲಿ ಸಮಾನ ಅವಕಾಶ ಮತ್ತು ಸೌಲಭ್ಯಗಳನ್ನು ಒದಗಿಸುವ ಮಹತ್ವಾಕಾಂಕ್ಷಿ ಉದ್ದೇಶ ಹೊಂದಲಾಗಿದೆ. ಸ್ಥಳೀಯ ಆರ್ಥಿಕತೆಗೆ ಈ ಸಭಾಭವನಗಳು ಮಹತ್ತರ ಕೊಡುಗೆ ನೀಡಲಿವೆ ಎಂದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಭಾಗೀರಥಿ ಮುರುಳ್ಯ, ಐವನ್ ಡಿಸೋಜ ಮೊದಲಾದವರು ಮಾತನಾಡಿ ಶುಭ ಹಾರೈಸಿದರು.ಸಮಾರಂಭದಲ್ಲಿ ವಿಕಾಸ ಎಜುಕೇಶನ್ ಟ್ರಸ್ಟ್ ನ ಟ್ರಸ್ಟಿಗಳಾದ ಜೆ.ಕೆ.ರಾವ್, ಕೊರಗಪ್ಪ, ಸೂರಜ್ ಕುಮಾರ್ ಕಲ್ಯ, ಜೆ. ಸಂತೋಷ್ ಪಾಲೆಮಾರ್, ಲ್ಯಾಂಡ್ ಲಿಂಕ್ಸ್ ಉಪಾಧ್ಯಕ್ಷ ಪ್ರದೀಪ್ ಪಾಲೆಮಾರ್, ಪ್ರಸನ್ನ ಪಾಲೆಮಾರ್ ಮತ್ತಿತರರು ಉಪಸ್ಥಿತರಿದ್ದರು.

ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಸಾನಿಧ್ಯ ಸಂಸ್ಥೆ, ಸೇವಾಶ್ರಮದ ಗೀತಾ ಶೆಟ್ಟಿ, ಸಮಾಜ ಸೇವಕಿ ತಬುಸ್ಸಮ್, ವಿಶೇಷ ಚೇತನ ಕಲಾವಿದ ಕೌಶಿಕ್ ಆಚಾರ್ಯ, ಪ್ರತಿಭಾವಂತರಾದ ಮಹಾಲಕ್ಷ್ಮಿ ಪೈ, ಮಹಾಲಕ್ಷ್ಮಿ ಭಾರ್ಗವ್, ದೀಶಾ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಪಾಲೆಮಾರ್ ಕನ್ವೆನ್ಶನ್ ನಿರ್ಮಾಣದ ಇಂಜಿನಿಯರ್ ಪ್ರವೀಣ್ ಕುಮಾರ್ ಮತ್ತು ಕೊರಗಪ್ಪರನ್ನು ಸನ್ಮಾನಿಸಲಾಯಿತು.

View this post on Instagram

A post shared by News Karnataka (@newskarnataka)