ಮಂಗಳೂರು: ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ (ಎಸ್.ಜೆ.ಇ.ಸಿ) 2026–27ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಬಿಇ, ಬಿಸಿಎ ಹಾಗೂ ಬಿಬಿಎ ತರಗತಿಗಳ ಉದ್ಘಾಟನೆ ಮತ್ತು ಎಂಜಿನಿಯರ್ಸ್ ಡೇ ಆಚರಣೆಯನ್ನು ಸೆಪ್ಟೆಂಬರ್ 15ರಂದು ಕಲಾಂ ಆಡಿಟೋರಿಯಂನಲ್ಲಿ ಆಯೋಜಿಸಲಾಯಿತು.

ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಎಸ್.ಜೆ.ಇ.ಸಿ ನಿರ್ದೇಶಕರಾದ ವಂ.ಫಾ. ವಿಲ್ಫ್ರೆಡ್ ಪ್ರಕಾಶ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮವು ಕಾಲೇಜು ಗಾಯನ ತಂಡದ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಪ್ರಾಂಶುಪಾಲರಾದ ಡಾ. ರಿಯೋ ಡಿಸೋಜಾ ಸ್ವಾಗತಿಸಿದರು. ದೀಪ ಬೆಳಗಿಸುವ ಮೂಲಕ ನೂತನ ವಿದ್ಯಾರ್ಥಿಗಳ ಶೈಕ್ಷಣಿಕ ಪಯಣಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಎಂಜಿನಿಯರ್ಸ್ ಡೇ ಅಂಗವಾಗಿ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ವಿಭಾಗಗಳ ಧ್ವಜಗಳನ್ನು ಅನಾವರಣಗೊಳಿಸಿದರು. ಪಿಯು ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಎಸ್.ಜೆ.ಇ.ಸಿಯ ಹಸಿರು ಮತ್ತು ಪರಿಸರ ಸ್ನೇಹಿ ಕ್ಯಾಂಪಸ್ನ್ನು ಶ್ಲಾಘಿಸಿ, ಸಮಗ್ರ ಶಿಕ್ಷಣಕ್ಕೆ ಸಂಸ್ಥೆ ನೀಡುತ್ತಿರುವ ಮಹತ್ವವನ್ನು ಮೆಚ್ಚಿದರು. ಸರ್ ಎಂ. ವಿಶ್ವೇಶ್ವರಯ್ಯ ಅವರ ಎಂಜಿನಿಯರಿಂಗ್ ಕ್ಷೇತ್ರ ಮತ್ತು ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದ ಅವರು, ವಿದ್ಯಾರ್ಥಿಗಳು ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಹಾಗೂ ನಿರಂತರವಾಗಿ ಕಲಿತು ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬೇಕು ಎಂದು ಕರೆ ನೀಡಿದರು. ವಿಕಸಿತ ಭಾರತ 2047ರ ಗುರಿಯಲ್ಲಿ ಯುವ ಎಂಜಿನಿಯರ್ಗಳ ಪಾತ್ರ ಮಹತ್ವದ್ದಾಗಿದ್ದು, ತಂತ್ರಜ್ಞಾನ, ನಾವೀನ್ಯತೆ ಮತ್ತು ಜವಾಬ್ದಾರಿಯುತ ನಾಯಕತ್ವದ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಅವರು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.

ಡಾ. ಬಿನು ಕೆ. ಜಿ. ಅವರು ಎಸ್.ಜೆ.ಇ.ಸಿ 2026–2030ರ ಐದು ವರ್ಷಗಳ ಕಾರ್ಯತಂತ್ರ ಯೋಜನೆಯನ್ನು ಪ್ರಸ್ತುತಪಡಿಸಿದರು. ಶೈಕ್ಷಣಿಕ ಶ್ರೇಷ್ಠತೆ, ಸಂಶೋಧನೆ, ನಾವೀನ್ಯತೆ, ಕೈಗಾರಿಕಾ ಸಹಯೋಗ ಹಾಗೂ ಸುಸ್ಥಿರ ಸಂಸ್ಥಾ ಅಭಿವೃದ್ಧಿಗೆ ಯೋಜನೆಯಲ್ಲಿ ಒತ್ತು ನೀಡಲಾಗಿದೆ.

ವಂ.ಫಾ. ವಿಲ್ಫ್ರೆಡ್ ಪ್ರಕಾಶ್ ಡಿಸೋಜಾ ಅವರು ಮುಖ್ಯ ಅತಿಥಿಯನ್ನು ಸನ್ಮಾನಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಂತ್ರಜ್ಞಾನ ಮತ್ತು ಮಾನವೀಯ ಮೌಲ್ಯಗಳ ನಡುವಿನ ಸಂಬಂಧವನ್ನು ವಿವರಿಸಿದ ಅವರು, “ಸರ್ವಿಸ್ & ಎಕ್ಸೆಲೆನ್ಸ್” ಎಂಬ ಕಾಲೇಜಿನ ಧ್ಯೇಯವಾಕ್ಯವನ್ನು ಉಲ್ಲೇಖಿಸಿ, ತಂತ್ರಜ್ಞಾನವು ಶಕ್ತಿಶಾಲಿ ಸಾಧನವಾದರೂ ಅದನ್ನು ಸರಿಯಾದ ರೀತಿಯಲ್ಲಿ ಬಳಸಲು ಮಾನವೀಯ ಮೌಲ್ಯಗಳು, ಶಿಸ್ತು, ಉತ್ತಮ ಮನೋಭಾವ ಮತ್ತು ಪರಸ್ಪರ ಗೌರವ ಅಗತ್ಯವೆಂದು ಹೇಳಿದರು.

ಕಾರ್ಯಕ್ರಮದ ಸಂಚಾಲಕಿ ಹಾಗೂ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶೀತಲ್ ಫೆರ್ನಾಂಡಿಸ್ ವಂದಿಸಿದರು. ಡಾ. ಪ್ರತಿಮಾ ಎಸ್. ಕಾರ್ಯಕ್ರಮ ನಿರೂಪಿಸಿದರು. ವಂ.ಫಾ. ಕೆನ್ನೆತ್ ಆರ್. ಕ್ರಾಸ್ಟಾ, ಡಾ. ರಾಜೇಶ್ ಕೆ., ಡೀನ್ಸ್, ವಿಭಾಗ ಮುಖ್ಯಸ್ಥರು, ಸಹಸಂಚಾಲಕ ದೀಪಕ್ ಲೋಬೊ, ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜು ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

