ಮಂಗಳೂರು : ಮಹಿಳಾ ಮೀಸಲಾತಿ ಮಸೂದೆ ಸಿಂಗಲ್ ಆಗಿ ಜಾರಿಗೆ ತನ್ನಿ, ನಿಮಗೇನ್ರಿ ತೊಂದ್ರೆ? ಬಿಜೆಪಿಗೆ ನಿಜವಾಗಿಯೂ ಮಹಿಳೆಯರ ಮೇಲೆ ಕಾಳಜಿ ಇದ್ದರೆ, ಕ್ಷೇತ್ರ ವಿಂಗಡಣೆಯ ನೆಪ ಬಿಟ್ಟು ತಕ್ಷಣವೇ ‘ಸಿಂಗಲ್ ಬಿಲ್ ಮೂಲಕ ಮೀಸಲಾತಿಯನ್ನು ಜಾರಿಗೆ ತರಲಿ ಎಂದು ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ ಸವಾಲು ಹಾಕಿದ್ದಾರೆ.

ನಗರದ ಕಾಂಗ್ರೆಸ್‌ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿರುವುದು ಕೇವಲ ಪ್ರಚಾರಕ್ಕಾಗಿ ಹೊರತು, ಮಹಿಳೆಯರಿಗೆ ನಿಜವಾದ ಅಧಿಕಾರ ನೀಡುವ ಉದ್ದೇಶ ಅವರಿಗಿಲ್ಲ ಎಂದರು.

ಮಹಿಳಾ ಮೀಸಲಾತಿ ಎಂಬುದು ಕಾಂಗ್ರೆಸ್‌ನ ದೀರ್ಘಕಾಲದ ಕನಸು ಎಂದು ಸ್ಮರಿಸಿದ ಅವರು, 1985ರಲ್ಲಿಯೇ ರಾಜೀವ್ ಗಾಂಧಿಯವರು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಶೇ. 33ರಷ್ಟು ಮೀಸಲಾತಿ ತರುವ ಮೂಲಕ ಮಹಿಳಾ ಕ್ರಾಂತಿಗೆ ನಾಂದಿ ಹಾಡಿದ್ದರು. ಅಂದು ಅವರು ಹಾಕಿಕೊಟ್ಟ ಅಡಿಪಾಯದಿಂದಲೇ ಇಂದು ಮಹಿಳೆಯರು ರಾಜಕೀಯವಾಗಿ ಸಬಲರಾಗಿ ನಿಮ್ಮ ಮುಂದೆ ನಿಲ್ಲುವ ಶಕ್ತಿ ಪಡೆದಿದ್ದಾರೆ. 2013ರಿಂದಲೂ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿತ್ತು ಎಂದು ಅವರು ತಿಳಿಸಿದರು.

ಕೇಂದ್ರದ ಬಿಜೆಪಿ ಸರ್ಕಾರದ ನಡೆಯನ್ನು ಟೀಕಿಸಿದ ಅವರು, “ಕೈಯಲ್ಲಿ ಕೀಲಿ ಇದೆ, ಆದರೆ ಅದನ್ನು ಯಾವಾಗ ಬಳಸಬೇಕು ಎಂಬುದು ಸರ್ಕಾರಕ್ಕೆ ತಿಳಿದಿಲ್ಲ” ಎಂದು ವ್ಯಂಗ್ಯವಾಡಿದರು. ಮಸೂದೆ ಜಾರಿಗೆ ಜನಗಣತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆಯ ಷರತ್ತುಗಳನ್ನು ವಿಧಿಸಿರುವುದು ಜಾರಿಯನ್ನು ಉದ್ದೇಶಪೂರ್ವಕವಾಗಿ ಮುಂದೂಡುವ ತಂತ್ರವಾಗಿದೆ. ಚುನಾವಣಾ ನೀತಿ ಸಂಹಿತೆ ಇರುವಾಗ ಇಂತಹ ಮಸೂದೆಯನ್ನು ತರಾತುರಿಯಲ್ಲಿ ಮಂಡಿಸುವ ಪ್ರೋಟೋಕಾಲ್ ಅಗತ್ಯವಿತ್ತೇ? 10 ದಿನಗಳ ಮೊದಲೇ ನೋಟಿಸ್ ನೀಡದೆ ಅನುಷ್ಠಾನಕ್ಕೆ ತರಲು ಹೊರಟಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಮೀರಾ ಕುಮಾ‌ರ್, ಪ್ರತಿಭಾ ಪಾಟೀಲ್ ಅವರಂತಹ ಮಹಿಳೆಯರಿಗೆ ಕಾಂಗ್ರೆಸ್ ಉನ್ನತ ಸ್ಥಾನಮಾನ ನೀಡಿದೆ. ಆದರೆ ಬಿಜೆಪಿಯ ಸಂಘಟನೆಯಲ್ಲಿ ಮಹಿಳೆಯರಿಗೆ ಯಾವ ಸ್ಥಾನ ನೀಡಲಾಗಿದೆ ಎಂದು ಅವರು ಪ್ರಶ್ನಿಸಿದರು. ಕ್ಷೇತ್ರ ವಿಂಗಡಣೆಯ ಕುರಿತು ಸರ್ಕಾರ ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಮಹಿಳಾ ಮುಖಂಡರಾದ ನಮಿತಾ ಡಿ. ರಾವ್, ಗೀತಾ ಅತ್ತಾವರ, ಸುರೇಖಾ ಚಂದ್ರಹಾಸ್, ಚಂದ್ರಕಲಾ ಜೋಗಿ, ರೂಪಾ ಚೇತನ್, ಸಾರಿಕಾ ಪೂಜಾರಿ, ರೂಪಾ ಉಷಾ ಅಂಚನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

View this post on Instagram

A post shared by News Karnataka (@newskarnataka)