ಮಂಗಳೂರು: ಬೈಕಂಪಾಡಿ ಬಳಿ ಬಜರಂಗದಳದ ಮಾಹಿತಿ ಮೇರೆಗೆ ಅಕ್ರಮ ಗೋ ಸಾಗಾಟ ಪತ್ತೆಯಾಗಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ. ಲಾರಿಯನ್ನು ತಡೆದು ಪಣಂಬೂರು ಪೊಲೀಸರು ತಪಾಸಣೆ ನಡೆಸಿದರು.
ಹಿಂಸಾತ್ಮಕ ರೀತಿಯಲ್ಲಿ ಸಾಗಿಸಲಾಗುತ್ತಿದ್ದ 16 ಗೋವುಗಳನ್ನು ರಕ್ಷಣೆ ಮಾಡಲಾಯಿತು. KA-19-AB-2715 ನೋಂದಣಿ ಸಂಖ್ಯೆಯ ಲಾರಿಯಲ್ಲಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದರು. ಪಣಂಬೂರು ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ ನಡೆಯಿತು.
ಬೈಕಂಪಾಡಿ ಪರಿಸರದಲ್ಲಿ ದಾಳಿ ನಡೆದಿದ್ದು, ಅಕ್ರಮ ಗೋ ಸಾಗಾಟ ನಿರಂತರವಾಗಿ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

