ಮಂಗಳೂರು: ಅಪಪ್ರಚಾರ ಮಾಡಿದ ‘ಬುರುಡೆ ಗ್ಯಾಂಗ್’ಗೇ ಆ ಮಂಜುನಾಥ ಸ್ವಾಮಿಯೇ ಶಿಕ್ಷೆ ಕೊಟ್ಟಿದ್ದಾನೆ. ನನ್ನ ಕ್ಷೇತ್ರಕ್ಕೆ ವಿಶ್ವನಾಯಕರಾದ ಪ್ರಧಾನಿ ನರೇಂದ್ರ ಮೋದಿ ಬಂದು ಪ್ರಚಾರ ಮಾಡಿದ್ದಾರೆ. ತಾಯಿಗೆ ದ್ರೋಹ ಬಗೆಯುವ ಕೆಲಸವನ್ನು ನಾನು ಮಾಡಿಲ್ಲ. ಬಿ.ಎಸ್. ಯಡಿಯೂರಪ್ಪನಂತಹ ಮಹಾನ್ ನಾಯಕರಿದ್ದಾರೆ. ಪಕ್ಷದ ಒಳಗೆ ಅಥವಾ ಹೊರಗೆ ಯಾರು ಈ ಷಡ್ಯಂತ್ರ ಮಾಡಿದ್ದಾರೆ ಎಂಬುದು ಪರಮಾತ್ಮನಿಗೆ ಗೊತ್ತು ಎಂದು ಬೇಲೂರು ಶಾಸಕ ಎಚ್ .ಕೆ ಸುರೇಶ್ ಹೇಳಿದರು.

ನಾನು ಯಾರ ಮೇಲೂ ಆರೋಪ ಅಥವಾ ಪ್ರತ್ಯಾರೋಪ ಮಾಡುವುದಿಲ್ಲ. ಎಲ್ಲದಕ್ಕೂ ಭಗವಂತನೇ ಸಾಕ್ಷಿ. 23ನೇ ಚುನಾವಣೆಯಲ್ಲಿ ಕಷ್ಟಪಟ್ಟು ಗೆದ್ದಿದ್ದೇನೆ. ಯಾವುದೇ ಪಕ್ಷ ಭೇದವಿಲ್ಲದೆ ಸಾಮಾನ್ಯನಾಗಿ ಕಾರ್ಯಕರ್ತರ ಜೊತೆ ಕೆಲಸ ಮಾಡುತ್ತಿದ್ದೇನೆ. ವಿಧಾನಸಭೆಯಲ್ಲಿ ರಾತ್ರಿ 2 ಗಂಟೆಯವರೆಗೂ ಕೂತು ರಾಜ್ಯ ಹಾಗೂ ಕ್ಷೇತ್ರದ ಸಮಸ್ಯೆಗಳ ಬಗ್ಗೆ ದನಿ ಎತ್ತುತ್ತಿದ್ದೇನೆ ಎಂದರು.

ನನ್ನ ಭವಿಷ್ಯದ ರಾಜಕಾರಣಕ್ಕೆ ಕಪ್ಪುಚುಕ್ಕೆ ತರುವ ದುರಾಸೆಯಿಂದ ಈ ಸುಳ್ಳು ಆರೋಪ ಮಾಡಲಾಗಿದೆ. ನಾನು ಯಾರಿಗೂ ಹೆದರಿಲ್ಲ, ನಿರ್ಭಯವಾಗಿ ದೇವರ ಮುಂದೆ ಆಣೆ ಪ್ರಮಾಣ ಮಾಡಿದ್ದೇನೆ. ಹಾಸನದ ಮಾಜಿ ಶಾಸಕರೊಬ್ಬರು ಇದರ ಹಿಂದಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ಶಾಸಕ ಸುರೇಶ್ ನಿರಾಕರಣೆ . ನಾನು ಯಾರ ಮೇಲೂ ಗೂಬೆ ಕೂರಿಸಲ್ಲ, ನನ್ನ ಪ್ರಾಮಾಣಿಕತೆಯನ್ನಷ್ಟೇ ದೇವರ ಮುಂದೆ ಪ್ರದರ್ಶನ ಮಾಡುತ್ತಿದ್ದೇನೆ ಎಂದರು.