ಮಂಗಳೂರು: ದಕ್ಷಿಣ ಕನ್ನಡ ಲೋಕ ಸಭಾ ಸೋಲಿನ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಮೊದಲಿಗೆ ನಾನು ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟರನ್ನ ಅಭಿನಂದಿಸುತ್ತೇನೆ. ಬಹಳಷ್ಟು ಗೌರವ ನನ್ನ ಪಕ್ಷ ನನಗೆ ಕೊಟ್ಟಿದೆ. ನನ್ನ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದಗಳನ್ನ ಹೇಳುತ್ತೇನೆ. ಸಾಮಾನ್ಯ ಕಾರ್ಯಕರ್ತನಾದ ನನ್ನನ್ನ ಅಭ್ಯರ್ಥಿಯಾಗಿ ಮಾಡಿದ್ದಾರೆ.
ಚುನಾವಣೆ ಎಂದ ಮೇಲೆ ಸೋಲು ಗೆಲುವು ಸರ್ವೇ ಸಾಮಾನ್ಯ . ದಕ್ಷಿಣ ಕನ್ನಡದಲ್ಲಿ ಟಿಕೆಟ್ ಪಡೆಯುವ ಸಮಯದಲ್ಲಿ, ಇಲ್ಲಿ ಟಿಕೆಟ್ ಪಡೆಯುವುದು ವೇಸ್ಟ್ ಅಂತಾ ಜನ ಹೇಳ್ತಾಯಿದ್ರು. ಇಲ್ಲಿ ಗೆಲುವು ಸಾಧ್ಯವಿಲ್ಲ ಅಂದಿದ್ರು. ಕೆಲವೇ ದಿನಗಳ ಸಮಯದಲ್ಲಿ ಸುಮಾರು 6 ಲಕ್ಷದಷ್ಟು ಮತ ಪಡೆದಿದ್ದೇನೆ ಎಂದರೆ ಹೆಮ್ಮೆಯಿದೆ.
ಕೆಲವು ಕ್ಷೇತ್ರಗಳಿಗೆ 6 ಗಂಟೆಯ ಸಮಯವನ್ನ ನೀಡಲು ಸಾಧ್ಯವಾಗಲಿಲ್ಲ. ಆದರೆ ನನ್ನ ಪಕ್ಷದ ನಾಯಕರು ಕೆಲಸ ಮಾಡಿದ್ದಾರೆ . ಈ ಹಿಂದಿನ ಅಭ್ಯರ್ಥಿಗಳಿಗಿಂತ ಹೆಚ್ಚಿನ ಮತ ಪಡೆದಿದ್ದೇನೆ ಅನ್ನೋ ಹೆಮ್ಮೆಯಿದೆ. ನಾನು ಸೋತಿರಬಹುದು, ಆದರೆ ಪಕ್ಷದ ಕಾರ್ಯಕರ್ತರು ನನಗೆ ನೀಡಿದ ಬೆಂಬಲವನ್ನ ಮರೆಯುವಂತಿಲ್ಲ. ಇದು ಅಂತ್ಯವಲ್ಲ ಇದು ಆರಂಭ, ಪ್ರತಿ ಬೂತ್ ಮಟ್ಟದಲ್ಲೂ ಪಕ್ಷ ಸಂಘಟನೆ ಬಲಿಷ್ಠಗೊಳಿಸುತ್ತೇನೆ.
ನನ್ನ ಸ್ಪರ್ಧೆ ಕಂಡು ರಾಷ್ಟ್ರೀಯ ನಾಯಕರು ಕರೆ ಮಾಡಿ ಶ್ಲಾಘಿಸಿದ್ದಾರೆ. ಯೂ ಫೋಟ್ ಲೈಕ್ ಎ ಲೈಯನ್ ಎಂದು ರಾಷ್ಟ್ರ ಮಟ್ಟದ ನಾಯಕರು ಕರೆ ಮಾಡಿದ್ದಾರೆ. ನಾವು ಪಕ್ಷ ಸಂಘಟನೆ ವಿಚಾರದಲ್ಲಿ ಹಿಂದೆ ಇದ್ದೇವೆ. ನಮ್ಮಲ್ಲಿ ಬೂತ್ ಮಟ್ಟದಲ್ಲಿ ಸಂಘಟನೆ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಇದನ್ನ ಬಲಿಷ್ಠಗೊಳಿಸುತ್ತೇವೆ. ರಾಜ್ಯ ಮಟ್ಟದಲ್ಲೂ ನಮ್ಮ ಸಾಧನೆ ಅಲ್ಲಗಳೆಯುವಂತಲ್ಲ. ಗ್ಯಾರಂಟಿ ಯೋಜನೆಗಳ ನಡುವೆ 9 ಸೀಟ್ ಬಂದಿರೋದು ಜನರ ಮನಸ್ಸು ಏನು ಎಂದು ಅರಿತುಕೊಳ್ಳಬೇಕಾಗಿರುತ್ತದೆ.
ಅಯೋದ್ಯೆ ಅಯೋಧ್ಯೆ ಅಂತಾ ಇದ್ದ ಬಿಜೆಪಿಯನ್ನ ಜನ , ಅಯೋಧ್ಯೆಯಲ್ಲೇ ಸೋಲಿಸಿದ್ದಾರೆ. ಆದರೆ ಮಂಗಳೂರಿನಲ್ಲಿ ಜನ ಬಿಜೆಪಿಯನ್ನ ಗೆಲ್ಲಿಸಿದ್ದಾರೆ, ಬುದ್ಧಿವಂತರು ಎನಿಸಿಕೊಳ್ಳುವ ಇಲ್ಲಿನ ಜನರು ಯೋಚಿಸಬೇಕಾಗಿದೆ. ಬ್ರಿಜೇಶ್ ಚೌಟಗೆ ಮನವಿ ದಯವಿಟ್ಟು ಬೇರೆ ಬೇರೆ ವಿಚಾರವನ್ನ ಬಿಟ್ಟು , ಜಿಲ್ಲೆಯ ಅಭಿವೃದ್ಧಿ ಮಾಡಿ. ಸಾಮರಸ್ಯದ ಗತ ವೈಭವ ಮರಳಿ ತರುವ ಪ್ರಯತ್ನ ಮಾಡಿ. ಒಳ್ಳೆಯ ಕೆಲಸಕ್ಕೆ ನಾನು ಬ್ರಿಜೇಶ್ ಚೌಟ ಜೊತೆಗೆ ಇದ್ದೇನೆ. ಸೋಲಿನ ನೈತಿಕ ಹೊಣೆ ನಾನೇ ಹೊತ್ತುಕೊಳ್ಳುತ್ತೇನೆ.
ಆದರೆ ಸುಮ್ಮನಾಗೋದಿಲ್ಲ ಪಕ್ಷ ಸಂಘಟನೆ ಬಲಿಷ್ಠಗೊಳಿಸುತ್ತೇವೆ.ಬಿಜೆಪಿಯ ಪಕ್ಷ ಸಂಘಟನೆ ನೋಡಬೇಕು, ಒಳ್ಳೆಯದನ್ನ ಅನುಸರಿಸುವುದರಲ್ಲಿ ತಪ್ಪಿಲ್ಲ. ಎಸ್ ಡಿ ಪಿ ಐ ನವರು ಅಸ್ಪೃಶ್ಯರಲ್ಲ. ಅಯೋಧ್ಯೆ ರಾಮ ಮಂದಿರ ಸಂದರ್ಭದಲ್ಲೆ ಬಿಜೆಪಿ ಪ್ರಚಾರ ಆರಂಭವಾಗಿದೆ. ಆದರೆ ರಾಮ ಮಂದಿರ ಕಟ್ಟಿಸಿ ರಾಜಕೀಯ ಮಾಡಬಾರದು. ಇನ್ನು ಇದೆ ಕಾರಣಕ್ಕೆ ಅಯೋಧ್ಯೆಯ ಜನ ಬಿಜೆಪಿಯನ್ನ ಸೋಲಿಸಿದ್ದಾರೆ ಎಂದರು.
ಇನ್ನು ಮಾಜಿ ಸಚಿವ ರಮಾನಾಥ್ ರೈ ಮಾತನಾಡಿ ಚುನಾವಣೆಯಲ್ಲಿ ಸೋತಿದ್ದರೂ,ನಾವು ನೈತಿಕವಾಗಿ ಗೆದ್ದಿದ್ದೇವೆ. ಆದರೆ ಬಿಜೆಪಿಯವರು ನೈತಿಕವಾಗಿ ಸೋತಿದ್ದಾರೆ. ಚಾರ್ ಸೊ ಪಾರ್ ಅನ್ನುತ್ತಿದ್ದವರು. ಈಗ ಅಧಿಕಾರ ಉಳಿಸಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಬೇರೆ ಬೇರೆ ರೀತಿಯಲ್ಲಿ ನಮ್ಮ ಒಕ್ಕೂಟವನ್ನ ಸೋಲಿಸುವ ಕೆಲಸ ಮಾಡಿದ್ದಾರೆ. ಇ ಡಿ,ಐಟಿ, ಬಳಸಿ ನಮ್ಮ ಬ್ಯಾಂಕ್ ಖಾತೆ,ಹಣವನ್ನ ಫ್ರೀಜ್ ಮಾಡುವ ಕೆಲಸ ಮಾಡಿದ್ದಾರೆ ಎಂದರು.

