ಮಂಗಳೂರು : ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ರೆಹಮಾನ್ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳಿಗೂ ಕೋಕಾ ಕಾಯ್ದೆ ಅಳವಡಿಸಿದ್ದು, ಈ ಪೈಕಿ ರೌಡಿಶೀಟರ್ ಭರತ್ ಕುಮ್ದೇಲು ಸೇರಿ ಆರು ಮಂದಿಗೆ ಹೆಚ್ಚುವರಿಯಾಗಿ ಗೂಂಡಾ ಕಾಯ್ದೆ ಹೇರಲಾಗಿದೆ.
ಭರತ್ ಕುಮ್ಮೇಲು (38), ಶಿವಪ್ರಸಾದ್ (33), ಪ್ರದೀಪ್ (34), ಅಭಿನ್ ರೈ (32), ತೇಜಾಕ್ಷ (24), ರಂಜಿತ್ (35) ಎಂಬವರ ವಿರುದ್ಧ ಗೂಂಡಾ ಕಾಯ್ದೆ ಅಳವಡಿಸಲಾಗಿರುತ್ತದೆ ಎಂದು ಜಿಲ್ಲಾ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೋಕಾ ಕಾಯ್ದೆಯಡಿ ಇತ್ತೀಚೆಗೆ ಭರತ್ ಕುಮೇಲು ಸೇರಿ ಎಂಟು ಮಂದಿಗೆ ಮೈಸೂರಿನ ಕೋಕಾ ನ್ಯಾಯಾಲಯ ಜಾಮೀನು ನೀಡಿತ್ತು. ಆದರೆ ಇದರ ಬೆನ್ನಲ್ಲೇ ಗೂಂಡಾ ಕಾಯ್ದೆ ಹೇರಲಾಗಿದ್ದು ಆರು ಮಂದಿಯನ್ನು ಜೈಲಿನಲ್ಲೇ ಉಳಿಯುವಂತೆ ಮಾಡಲಾಗಿದೆ.
ಕಳೆದ 2025ರ ಮೇ 27ರಂದು ಬಂಟ್ವಾಳ ತಾಲೂಕಿನ ಕೊಳ್ತಮಜಲಿನಲ್ಲಿ ಮರಳು ಅನ್ ಲೋಡ್ ಮಾಡುತ್ತಿದ್ದ ಅಬ್ದುಲ್ ರಹಿಮಾನ್ ಎಂಬವರನ್ನು ಬೈಕಿನಲ್ಲಿ ಬಂದಿದ್ದ ಯುವಕರು ಕಡಿದು ಹತ್ಯೆ ಮಾಡಿದ್ದರು. ಬಜ್ಜೆಯಲ್ಲಿ ನಡೆದಿದ್ದ ಬಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆಗೆ ಪ್ರತೀಕಾರ ರೂಪದಲ್ಲಿ ಈ ಕೊಲೆಯಾಗಿತ್ತು ಎನ್ನುವ ವದಂತಿ ಹರಡಿತ್ತು. ಪ್ರಕರಣ ಸಂಬಂಧಿಸಿ 13 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಬಜರಂಗದಳ ಮುಖಂಡನಾಗಿದ್ದ ಭರತ್ ಕುಮೇಲು, ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದ ಸೂತ್ರಧಾರ ಎನ್ನುವ ನೆಲೆಯಲ್ಲಿ ಬಳಿಕ ಬಂಧಿಸಲಾಗಿತ್ತು. ಪ್ರಕರಣದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾದ ಕಾರಣ ಮತ್ತು ಕರಾವಳಿಯಲ್ಲಿ ಕೋಮು ದ್ವೇಷ ಹರಡಿದ ಹಿನ್ನೆಲೆಯಲ್ಲಿ ಎಲ್ಲ ಆರೋಪಿಗಳಿಗೂ ಕೋಕಾ ಕಾಯ್ದೆ ಹೇರಲಾಗಿತ್ತು. ಆದರೆ ಕೋಕಾ ಕಾಯ್ದೆಯಡಿ ಭರತ್ ಕುಮೇಲು ಮತ್ತು ಇತರ ಏಳು ಆರೋಪಿಗಳಿಗೆ ಜಾಮೀನು ಸಿಕ್ಕಿದ್ದು ಎಸ್ಸಿಪಿಐ ಸೇರಿ ಮುಸ್ಲಿಮ್ ಪರ ಸಂಘಟನೆಗಳನ್ನು ಕೆರಳಿಸಿತ್ತು.
ಇದರ ಬೆನ್ನಲ್ಲೇ ಪೊಲೀಸರು ಆರು ಮಂದಿ ಆರೋಪಿಗಳ ಮೇಲೆ ಕೋಕಾ ಕಾಯ್ದೆ ಹೇರಿಕೆ ಮಾಡಿದ್ದಾರೆ. ಅಬ್ದುಲ್ ರಹಿಮಾನ್ ಹತ್ಯೆಗೆ ಪ್ರತೀಕಾರವಾಗಿ ಭರತ್ ನನ್ನೇ ತೆಗೆಯುತ್ತೇವೆಂದು ಒಂದೆಡೆ ಆಕ್ರೋಶ ಹೊಯ್ದಾಡುತ್ತಿದ್ದರೆ, ಇದನ್ನರಿತ ಪೊಲೀಸರು ಗಲಾಟೆಗೆ ಆಸ್ಪದವೇ ಬೇಡವೆಂದು ಮತ್ತೊಂದು ಕಾಯ್ದೆ ಮೂಲಕ ಜೈಲಿನಲ್ಲೇ ಕೊಳೆಯುವಂತೆ ಮಾಡಿದ್ದಾರೆ. ಮಂಗಳೂರಿಗೆ ಸಿಎಂ ಡಿಕೆಶಿ ಬಂದಿದ್ದಾಗಲೇ ಕೋಕಾದಲ್ಲಿ ಜಾಮೀನು ಸಿಕ್ಕಿರುವುದು ಮುಸ್ಲಿಂ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಸುಹಾಸ್ ಶೆಟ್ಟಿ ಮತ್ತು ಅಬ್ದುಲ್ ರಹಿಮಾನ್ ಹತ್ಯೆ ಬೆನ್ನಲ್ಲೇ ಮಂಗಳೂರಿನಲ್ಲಿ ಕಮಿಷನರ್ ಬದಲಾಗಿತ್ತು. ಹಿಂದೆ ಇದ್ದ ಅನುಪಮ್ ಅಗರ್ವಾಲ್ ಬದಲು ರಫ್ ಅಂಡ್ ಟಫ್ ಎಂದು ಗುರುತಿಸಲ್ಪಟ್ಟ ಸುಧೀರ್ ರೆಡ್ಡಿ ಕರೆಸಲಾಗಿತ್ತು. ಆನಂತರ, ಎಲ್ಲ ರೀತಿಯ ಕೋಮು ದ್ವೇಷದ ವಾತಾವರಣಕ್ಕೂ ಅಂತ್ಯ ಹಾಡಲಾಗಿದೆ ಎಂದು ಮೇಲ್ನೋಟಕ್ಕೆ ಅನಿಸಿದ್ದರೂ ಒಳಗೊಳಗೆ ದ್ವೇಷ ಹೊಗೆಯಾಡುತ್ತಲೇ ಇದೆ. ಹಿಂದು ಸಂಘಟನೆ ಮುಖಂಡ ಶರಣ್ ಪಂಪೈಲ್, ಗೂಂಡಾ ಕಾಯ್ದೆ ಹೇರಿದ್ದನ್ನು ಖಂಡಿಸಿದ್ದು ಕಾಂಗ್ರೆಸ್ ಸರ್ಕಾರ ಹಿಂದು ದಮನ ನೀತಿಯನ್ನು ತೋರುತ್ತಿದೆ ಎಂದು ಪೋಸ್ಟ್ ಮಾಡಿದ್ದಾರೆ.

