ಮಂಗಳೂರು: ಕ್ರೈಸ್ತ ಧರ್ಮದ ಅತ್ಯಂತ ಪವಿತ್ರ ಹಾಗೂ ಶೋಕದ ದಿನವಾದ ‘ಶುಭ ಶುಕ್ರವಾರ’ವನ್ನು (ಗುಡ್ ಫ್ರೈಡೇ) ಮಂಗಳೂರು ಧರ್ಮಪ್ರಾಂತ್ಯದಾದ್ಯಂತ ಇಂದು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಗುತ್ತಿದೆ. ಈ ವರ್ಷದ ಆಚರಣೆಯು ವಿಶೇಷವಾಗಿ “ಮಕ್ಕಳ ವರ್ಷ” ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿದ್ದು, ಚರ್ಚ್ಗಳ ವಿವಿಧ ವಿಧಿವಿಧಾನಗಳಲ್ಲಿ ಮಕ್ಕಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ.

ಯೇಸುವಿನ ಕೊನೆಯ ಭೋಜನದ ಗುರುವಾರ: ಮಕ್ಕಳಿಗೆ ಪಾದಕ್ಷಾಲನೆ ಸೇವೆಯ ವಿಶೇಷತೆ
ಮಕ್ಕಳ ಮೇಲಿನ ವಿಶೇಷ ಕಾಳಜಿಯ ಭಾಗವಾಗಿ, ಯೇಸುವಿನ ಕೊನೆಯ ಭೋಜನದ ಗುರುವಾರದಂದು ನಡೆದ ‘ಪ್ರಭುವಿನ ಭೋಜನ’ದ ಬಲಿಪೂಜೆಯಲ್ಲಿ ಅನೇಕ ಚರ್ಚ್ಗಳಲ್ಲಿ ಮಕ್ಕಳಿಗೆ ಪಾದಕ್ಷಾಲನೆ ಮಾಡಲಾಯಿತು. ಸಾಮಾನ್ಯವಾಗಿ ಹನ್ನೆರಡು ಮಂದಿ ಹಿರಿಯರಿಗೆ ನಡೆಯುವ ಈ ಪಾದಕ್ಷಾಲನಾ ವಿಧಿಯನ್ನು ಈ ಬಾರಿ ಮಕ್ಕಳಿಗೆ ಮಾಡುವ ಮೂಲಕ, ಯೇಸು ಕ್ರಿಸ್ತರು ತೋರಿದ ನಮ್ರತೆ ಮತ್ತು ಸೇವೆಯ ಗುಣವನ್ನು ಮುಂದಿನ ಪೀಳಿಗೆಗೆ ದಾಟಿಸುವ ಪ್ರಯತ್ನ ಮಾಡಲಾಯಿತು. ಬಲಿಪೂಜೆಯ ನಂತರ ನಡೆದ ಆರಾಧನೆಯಲ್ಲೂ ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡರು.

ಶಿಲುಬೆಯ ಹಾದಿಯಲ್ಲಿ ಗಮನ ಸೆಳೆದ ಮಕ್ಕಳು
ಇಂದು ಬೆಳಿಗ್ಗೆ ಧರ್ಮಪ್ರಾಂತ್ಯದ ಬಹುತೇಕ ಚರ್ಚ್ಗಳಲ್ಲಿ ನಡೆದ ‘ಶಿಲುಬೆಯ ಹಾದಿ’ಯ ಭಕ್ತಿ ಸೇವೆಯಲ್ಲಿ ಮಕ್ಕಳು ಮುಂಚೂಣಿಯಲ್ಲಿದ್ದರು. ಕ್ರಿಸ್ತರ ಕಷ್ಟಾನುಭವಗಳ ಹದಿನಾಲ್ಕು ಸ್ಥಳಗಳ ಸ್ಮರಣೆಯ ಸಂದರ್ಭದಲ್ಲಿ, ಮಕ್ಕಳೇ ಶಿಲುಬೆಯನ್ನು ಹೊತ್ತು ಸಾಗಿದ್ದು ನೆರೆದಿದ್ದ ಭಕ್ತಾದಿಗಳ ಗಮನ ಸೆಳೆಯಿತು. ಮಕ್ಕಳಿಗಾಗಿಯೇ ವಿಶೇಷ ಧ್ಯಾನ ಮತ್ತು ಪ್ರಾರ್ಥನೆಗಳನ್ನು ಹಮ್ಮಿಕೊಳ್ಳಲಾಗಿತ್ತು, ಇದು ಅವರಿಗೆ ಕ್ರಿಸ್ತನ ತ್ಯಾಗದ ಸಂದೇಶವನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಯಿತು.

ಹೊರಾಂಗಣ ಶಿಲುಬೆಯ ಹಾದಿ ಮತ್ತು ಜೀವಂತ ಪ್ರದರ್ಶನ
ಅನೇಕ ಧರ್ಮಕೇಂದ್ರಗಳಲ್ಲಿ ಚರ್ಚ್ನ ಹೊರಾಂಗಣದಲ್ಲಿ ಮತ್ತು ಸಾರ್ವಜನಿಕ ರಸ್ತೆಗಳಲ್ಲಿ ಶಿಲುಬೆಯ ಹಾದಿಯ ಮೆರವಣಿಗೆ ನಡೆಯಿತು. ಕೆಲವು ಕಡೆ ಯೇಸುವಿನ ಮರಣದಂಡನೆಯ ದೃಶ್ಯಗಳನ್ನು ‘ಜೀವಂತ ಪ್ರದರ್ಶನ’ದ (Live Enactment) ಮೂಲಕ ಪ್ರಸ್ತುತಪಡಿಸಲಾಯಿತು. ಧರ್ಮಗುರುಗಳು, ಧರ್ಮಭಗಿನಿಯರು, ವಾರ್ಡ್ ಗುರಿಕಾರರು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಈ ಭಕ್ತಿ ಸೇವೆಯ ನೇತೃತ್ವ ವಹಿಸಿದ್ದರು. ಮಧ್ಯಾಹ್ನ 12 ಗಂಟೆಯ ವೇಳೆಗೆ ಎಲ್ಲಾ ಚರ್ಚ್ಗಳಲ್ಲಿ ಈ ಪ್ರಾರ್ಥನಾ ವಿಧಿಗಳು ಪೂರ್ಣಗೊಂಡವು.

ಪಂಜ ಚರ್ಚ್ನಲ್ಲಿ ಬಿಷಪ್ ಭಾಗಿ; ಅಪರಾಹ್ನ ವಿಶೇಷ ಆರಾಧನೆ
ಬೆಳಿಗ್ಗೆಯಿಂದಲೇ ಉಪವಾಸ ಮತ್ತು ಮೌನ ಪ್ರಾರ್ಥನೆಯಲ್ಲಿ ತೊಡಗಿರುವ ಭಕ್ತಾದಿಗಳು ಈಗ ಅಪರಾಹ್ನದ ಧಾರ್ಮಿಕ ವಿಧಿಗಳಿಗೆ ಸಜ್ಜಾಗುತ್ತಿದ್ದಾರೆ. ಕ್ರಿಸ್ತರು ಪ್ರಾಣ ಬಿಟ್ಟ ಸಮಯವೆಂದು ನಂಬಲಾದ ಮಧ್ಯಾಹ್ನ 3 ಗಂಟೆಯ ನಂತರ ಚರ್ಚ್ಗಳಲ್ಲಿ ವಿಶೇಷ ಆರಾಧನೆ ನಡೆಯಲಿದೆ. ಈ ಸಂದರ್ಭದಲ್ಲಿ ಶಿಲುಬೆಯ ಆರಾಧನೆ, ಪವಿತ್ರ ಪ್ರಸಾದ ಸ್ವೀಕಾರ ಮತ್ತು ಕ್ರಿಸ್ತರ ಕಷ್ಟಾನುಭವದ ವಾಚನ ನಡೆಯಲಿದೆ. ಇಂದು ಯಾವುದೇ ಬಲಿಪೂಜೆ (ಮಾಸ್) ಇರುವುದಿಲ್ಲ.

ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರು ಪುತ್ತೂರು ವಲಯದ ಪಂಜದ ಸಂತ ರೀಟಾ ಚರ್ಚ್ನಲ್ಲಿ ನಡೆಯುವ ಶುಭ ಶುಕ್ರವಾರದ ಧಾರ್ಮಿಕ ವಿಧಿಗಳಲ್ಲಿ ಭಾಗವಹಿಸಲಿದ್ದಾರೆ. ಈ ಶೋಕದ ಆಚರಣೆಯು ನಾಳೆ ರಾತ್ರಿ ನಡೆಯಲಿರುವ ‘ಪಾಸ್ಖಾ ಜಾಗರಣೆ’ಯೊಂದಿಗೆ (ಈಸ್ಟರ್ ವಿಜಿಲ್) ಕೊನೆಗೊಂಡು, ಭಾನುವಾರ ಕ್ರಿಸ್ತರ ಪುನರುತ್ಥಾನದ ಹಬ್ಬವಾದ ಈಸ್ಟರ್ ಅನ್ನು ಸಡಗರದಿಂದ ಆಚರಿಸಲಾಗುವುದು.

