ಮಂಗಳೂರು: ಎಸ್ಐಟಿ ಕಚೇರಿಗೆ ದಾಖಲೆ ಸಲ್ಲಿಸಿದ ಬಳಿಕ ಗಿರೀಶ್ ಮಟ್ಟಣ್ಣನವರ್ ಹೇಳಿಕೆ ನೀಡಿದ್ದಾರೆ. ನಮ್ಮ ಮೇಲಿರೋ ಎಲ್ಲಾ ಆರೋಪಗಳಿಗೆ ಸ್ಪಷ್ಟನೆ ಕೊಟ್ಟು ಬಂದಿದ್ದೇನೆ. ಮೊಬೈಲ್ ಇರೋ ಕಾಲದಲ್ಲಿ ಯಾರೂ ಸುಳ್ಳು ಹೇಳಲು ಆಗಲ್ಲ. ನನ್ನನ್ನ ಅಪರಾಧ ಮಾಡಿದ್ದೀನಿ ಅಂತ ಅವರು ಕರೆದಿಲ್ಲ. ಪತ್ರ ಬರೆದ ಕಾರಣಕ್ಕೆ ಎಸ್ಐಟಿ ನನ್ನನ್ನ ಕರೆದಿದೆ, ದಾಖಲೆ ಕೊಟ್ಟು ಬಂದಿದ್ದೇನೆ ಎಂದರು.
ಇಲ್ಲಿನ ಪಂಚಾಯತ್ ನಲ್ಲಿ ಹೆಣ ಹೂತು ಹಾಕಿದ ಅಕ್ರಮಗಳ ಬಗ್ಗೆ ದಾಖಲೆ ನೀಡಿದ್ದೇನೆ. ದಾಖಲೆ ಫೋರ್ಜರಿ ಮಾಡಿದ ಬಗ್ಗೆ ದಾಖಲೆ ಸಲ್ಲಿಕೆ ಮಾಡಿದ್ದೇನೆ. ಪಂಚಾಯತ್ ದಾಖಲೆಯಲ್ಲಿ ದೊಡ್ಡ ಮಟ್ಟದ ಫೋರ್ಜರಿ ಆಗಿದೆ. ಮಂಜುನಾಥ ನನ್ನ ಸ್ವಾಮಿ, ನಾನು ಅವರಿಗೆ ದ್ರೋಹ ಮಾಡಲು ಆಗಲ್ಲ. ಮಹೇಶ್ ಶೆಟ್ಟಿ ತಿಮರೋಡಿ ಅಥವಾ ನಾನು ಇಷ್ಟೊತ್ತಿಗೆ ಅರೆಸ್ಟ್ ಆಗಬೇಕಿತ್ತು ಎಂದರು.
ನಾವು ಯಾವುದೇ ಕಾರಣಕ್ಕೆ ನಿರೀಕ್ಷಣಾ ಜಾಮೀನು ಪಡೆಯಲ್ಲ. ಸುಳ್ಳು ದಾಖಲೆ ಸೃಷ್ಟಿಸಿ ಅರೆಸ್ಟ್ ಮಾಡೋದಾದ್ರೆ ಅರೆಸ್ಟ್ ಮಾಡಲಿ. ನಾವು ನ್ಯಾಯಯುತವಾದ ಹೋರಾಟ ಮಾಡ್ತಾ ಇದೀವಿ. ಚಿನ್ನಯ್ಯ ಯಾಕೆ ಹೇಳಿಕೆ ಬದಲಿಸಿದ ಅನ್ನೋ ಕಟ್ಟು ಕಥೆ ನೋಡಿ ನಾನು ಹೇಳಿಕೆ ನೀಡಲ್ಲ. ಹಳೆಯ ಎಫ್ಐಆರ್ ಗೆ ಬೇರೆ ಸೆಕ್ಷನ್ ಹಾಕಿದ್ದಾರೆ ಅಂತಾರೆ. ಹಾಗಾಗಿ ಎಸ್ಐಟಿ ತೀರ್ಮಾನ ತೆಗೊಳ್ಳಲಿದೆ, ಅವರ ಮೇಲೆ ನಮಗೆ ನಂಬಿಕೆ ಇದೆ ಎಂದರು.
ಆತ ಹೇಳಿಕೆ ಬದಲಿಸುವ ಸಂಚು ಯಾರು ರೂಪಿಸಿದ್ದಾರೆ ಅಂತ ತನಿಖೆ ಆಗಲಿ. ಯಾರೋ ಬ್ರೈನ್ ವಾಶ್ ಮಾಡಿದ್ದಾರೆ ಅನ್ನೋ ಸಂಶಯ ಇದೆ. ಹಣ ಕೊಟ್ಟು ಅವನಲ್ಲಿ ಹೇಳಿಕೆ ಕೊಡಿಸಿದ್ದರೆ ಅದು ಗೊತ್ತಾಗಬೇಕಿತ್ತು. ಎಸ್ಐಟಿ ಎಲ್ಲದರ ಸಮಗ್ರ ತನಿಖೆ ನಡೆಸಲಿ, ಎಲ್ಲವೂ ಸರಿಯಾಗಬೇಕು. ಈಗಾಗಲೇ ಸಾಕಷ್ಟು ಜನ ಸತ್ತು ಹೋಗಿದ್ದಾರೆ, ಅದರಲ್ಲಿ ಅಕ್ರಮ ನಡೆದಿದೆ. ಪಂಚಾಯತ್ ಪೋರ್ಜರಿ ಬಗ್ಗೆ ದಾಖಲೆ ಎಸ್ಐಟಿಗೆ ಸಲ್ಲಿಕೆ ಮಾಡಿದ್ದೇನೆ. ಧರ್ಮಸ್ಥಳ ಕ್ಷೇತ್ರ ನಮ್ಮದು, ನಾವು ಯಾವತ್ತೂ ಅದರ ವಿರುದ್ದ ಆರೋಪ ಮಾಡಿಲ್ಲ ಎಂದರು.
ಸತ್ತವರ ದೇಹಗಳನ್ನು ಧರ್ಮಸ್ಥಳದಲ್ಲಿ ಕಾನೂನು ಮೀರಿ ವಿಲೇವಾರಿ ಮಾಡಲಾಗಿದೆ. ನಾನು ಎಲ್ಲಾ ದಾಖಲೆಗಳನ್ನು ಎಸ್ಐಟಿಗೆ ಸಲ್ಲಿಕೆ ಮಾಡಿದ್ದೇನೆ. ಗೌಪ್ಯವಾಗಿ ಸಾಕ್ಷ್ಯ ಸಲ್ಲಿಕೆ ಮಾಡಬೇಕು, ಅದನ್ನ ಸಲ್ಲಿಸಿದ್ದೇನೆ. ನನಗಾಗಲೀ ತಿಮರೋಡಿಯವರಿಗಾಗಲೀ ಯಾವುದೇ ನೊಟೀಸ್ ಕೊಟ್ಟಿಲ್ಲ. ಇಲ್ಲಿನ ಲಾಡ್ಜ್ ನಲ್ಲಿ ಜೋಡಿ ಜೋಡಿ ಸತ್ತಿದ್ದಾರೆ, ಅದನ್ನ ಕಾನೂನುಬದ್ದವಾಗಿ ಹೂತಿಲ್ಲ. ಅದೇ ಅನುಮಾನ ಮತ್ತು ಅಕ್ರಮದ ಬಗ್ಗೆ ನಾನು ಹೇಳ್ತಾ ಇದೀನಿ. ನನಗೆ ಈಗಲೂ ಮಹೇಶ್ ಶೆಟ್ಟಿ ತಿಮರೋಡಿ ಜತೆಗೇ ಇದ್ದೇನೆ ಎಂದರು.

