ಮಂಗಳೂರು: ಗಣೇಶ ಚತುರ್ಥಿ ಸಂಭ್ರಮಕ್ಕೆ ಮಂಗಳೂರಿನಿಂದ ಅಮೇರಿಕಾಕ್ಕೆ ಗಣಪ ಪ್ರಯಾಣಿಸಲಿದ್ದಾನೆ. ಹೌದು. . ವಿಘ್ನ ನಿವಾರಕ ವಿಫ್ನೆಶ್ವರನ ಚತುರ್ಥಿ ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಮಂಗಳೂರಿನಲ್ಲಿ ತಯಾರಾಗುವ ಪರಿಸರ ಸ್ನೇಹಿ ಗಣಪತಿ ವಿಗ್ರಹಕ್ಕೆ ಅಮೇರಿಕದಲ್ಲೂ ಬೇಡಿಕೆಯಿದೆ.
ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಒಂದೇ ಕುಟುಂಬದಿಂದ ಸುಮಾರು 250ಕ್ಕೂ ಅಧಿಕ ಆವೆ ಮಣ್ಣಿನಲ್ಲಿ ಪರಿಸರ ಸ್ನೇಹಿ ಗಣಪತಿ ವಿಗ್ರಹ ನಿರ್ಮಾಣವಾಗುತ್ತಿದೆ. ಸುಮಾರು 95 ವರ್ಷದಿಂದ ಗಣಪನ ಮೂರ್ತಿ ತಯಾರಿಯಲ್ಲಿ ಮಣ್ಣಗುಡ್ಡೆ ದಿ|ಮೋಹನ್ ರಾವ್ ಕುಟುಂಬ ಖ್ಯಾತಿ ಪಡೆದಿದೆ.
ಉನ್ನತ ಹುದ್ದೆ, ಕೈ ತುಂಬಾ ಸಂಬಳವಿದ್ದರೂ ಗಣಪತಿ ವಿಗ್ರಹ ತಯಾರಿಯಲ್ಲಿ ಕುಟುಂಬಸ್ಥರು ತೃಪ್ತಿ ಪಡೆಯುತ್ತಿದ್ದಾರೆ. ಗಣೇಶ ಚತುರ್ಥಿ ಸಮೀಪಸುತ್ತಲೇ ಎಲ್ಲಾ ಕೆಲಸ, ಕಾರ್ಯ ಬದಿಗಿಟ್ಟು ಗಣಪನ ವಿಗ್ರಹ ತಯಾರಿಯಲ್ಲಿ ಭಾಗಿಯಾಗುತ್ತಾರೆ.
ಕುಟುಂಬದ ಹಿರಿಯ ಮೋಹನ್ ರಾವ್ ಬಳಿಕ ವಿಗ್ರಹ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುತ್ತಿರುವ 4ನೇ ತಲೆಮಾರು ಇದು. 2 ತಿಂಗಳು ಕಾಲ ಗಣಪತಿ ವಿಗ್ರಹ ನಿರ್ಮಾಣ ಕಾಯಕದಲ್ಲೇ ಕುಟುಂಬಸ್ಥರು ಭಾಗಿಯಾಗುತ್ತಿದ್ದಾರೆ. ಯಾವುದೇ ರಾಸಾಯನಿಕ ಬಳಸದೆ ಆವೆ ಮಣ್ಣಿನಲ್ಲೆ ಗಣಪತಿ ಮೂರ್ತಿ ನಿರ್ಮಾಣ ಮಾಡುತ್ತಾರೆ. ಹಾಗಾಗಿ 27 ವರ್ಷದಿಂದ ಕ್ಯಾಲಿಫೋರ್ನಿಯದ ಭಾರತೀಯ ಕುಟುಂಬವೊಂದಕ್ಕೆ ಗಣಪನ ಮೂರ್ತಿ ಪೂರೈಕೆ ಮಾಡುತ್ತಿದ್ದಾರೆ.

