ಮಂಗಳೂರು : ಕೆಥೋಲಿಕ್ ಧರ್ಮಪ್ರಾಂತ್ಯದ ಹಿರಿಯ ಧರ್ಮಗುರು, ಫಾ. ವಿಕ್ಟರ್ ಮಚಾದೊ (81) ಸೋಮವಾರ ಜೆಪ್ಪುವಿನ ಸೈಂಟ್ ಜುಜೆ ವಾಜ್ ಹೋಮ್‌ನಲ್ಲಿ ನಿಧನರಾದರು.

ಬಂಟ್ವಾಳ ಮೂಲದವರಾದ ಫಾದರ್ ಮಚಾದೊ ಅವರು 1969 ಅಕ್ಟೋಬ‌ರ್ 16ರಂದು ಧರ್ಮಗುರು ದೀಕ್ಷೆ ಪಡೆದಿದ್ದರು. ಐದು ದಶಕಗಳಿಗೂ ಹೆಚ್ಚು ಕಾಲ ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಚರ್ಚ್‌ಗಳಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ, ಸಮಾಜಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಕೊಡುಗೆ ನೀಡಿದ್ದಾರೆ.

1970ರಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಆರಂಭಿಸಿದ್ದ ವಿಕ್ಟರ್ ಮಚಾದೊ ಅವರು ಜೆಪ್ಪುವಿನ ಸೈಂಟ್ ಜೋಸೆಫ್ ಸೆಮಿನರಿಯಲ್ಲಿ ಟೀಚಿಂಗ್ ಸ್ಟಾಪ್ ಆಗಿ ಬಳಿಕ ರೋಮ್‌ನಲ್ಲಿ ಉನ್ನತ ಶಿಕ್ಷಣ ಪಡೆದು ವಾಪಸಾಗಿ ಪ್ರೊಫೆಸರ್ ಆಗಿ, ರೊಸಾರಿಯೊ ಕೆಥೆಡ್ರಲ್‌ನಲ್ಲಿ ಧರ್ಮಗುರು, ಜೆಪ್ಪು ಚರ್ಚ್ ನ ನಿರ್ವಾಹಕರು, ಸೈಂಟ್ ಜೋಸೆಫ್ ಸೆಮಿನರಿಯ ರೆಕ್ಟ‌ರ್, ಬಿಜೈ ಚರ್ಚ್‌ ಧರ್ಮಗುರು, ಪಾಲ್ಗೊರಲ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕರು, ಕೊರ್ಡೆಲ್ ಚರ್ಚ್ ಧರ್ಮಗುರು, ಮರೋಳಿಯ ‘ಲಿಟಲ್ ಸಿಸ್ಟರ್ಸ್‌ ಆಫ್‌ ದಿ ಪುವರ್‌ನಲ್ಲಿ ಚ್ಯಾಪ್ಲೇನ್ ಆಗಿ ಸೇವೆ ಸಲ್ಲಿಸಿ 2025ರಲ್ಲಿ ನಿವೃತ್ತಿ ಪಡೆದಿದ್ದರು.

ಆಗಸ್ಟ್ 18ರಂದು ಅಂತ್ಯಕ್ರಿಯೆ : ಫಾ.ವಿಕ್ಚರ್ ಮಚಾದೊ ಪಾರ್ಥಿವ ಶರೀರದ ಅಂತ್ಯಕ್ರಿಯೆ ಆಗಸ್ಟ್ 18ರಂದು ಅಪರಾಹ್ನ 3:30 ಕ್ಕೆ ವಲೆನ್ಸಿಯಾದ ಸೈಂಟ್ ವಿನ್ಸೆಂಟ್ ಫೆರರ್ ಚರ್ಚ್ ನಲ್ಲಿ ನೆರವೇರಲಿವೆ.