ಮಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡಿದ ವೇದಿಕೆಯನ್ನು ‘ಶುದ್ದೀಕರಣ’ ಹೆಸರಲ್ಲಿ ಅವಮಾನಿಸಿದ ಘಟನೆ ಹಾಗೂ ಇದನ್ನು ಪ್ರಶ್ನಿಸಿದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆ‌ರ್ ದಾಖಲಿಸಿರುವ ಉತ್ತರಾಖಂಡದ ಬಿಜೆಪಿ ಸರಕಾತವನ್ನು ಖಂಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಪ್ರಚಾರ ಸಮಿತಿಯ ದ.ಕ. ಜಿಲ್ಲಾ ಸಮಿತಿ ವತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಬುಧವಾರ ಗಾಂಧಿ ಸತ್ಯಾಗ್ರಹ- ಧರಣಿ ನಡೆಯಿತು.

ಕಳೆದ 12 ವರ್ಷಗಳ ಕೇಂದ್ರದ ಎನ್‌ಡಿಎ ಸರಕಾರದ ಆಡಳಿತದಲ್ಲಿ ಯುವಜನರ ಉದ್ಯೋಗ, ಶಿಕ್ಷಣ, ಪರೀಕ್ಷೆ-ನೇಮಕಾತಿ, ಸಮಾನ ಅವಕಾಶ, ಹಾಗೂ ಭವಿಷ್ಯದ ಭದ್ರತೆಗೆ ಸಂಬಂಧಿಸಿದ ವೈಫಲ್ಯಗಳನ್ನು ಈ ಸಂದರ್ಭದಲ್ಲಿ ಪ್ರಶ್ನಿಸಿದರು.

ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಈ ಸಂದರ್ಭದಲ್ಲಿ ಮಾತನಾಡಿ ‘ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡಿದ ವೇದಿಕೆಯನ್ನು ‘ಶುದ್ದೀಕರಣ’ ಹೆಸರಲ್ಲಿ ಅವಮಾನಿಸಿದ ಘಟನೆ ಖಂಡಿಸಿ ಕೆಪಿಸಿಸಿ ಪ್ರಚಾರ ಸಮಿತಿಯ ವತಿಯಿಂದ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಧರಣಿ ನಡೆದಿದೆ. ಈಗ ಕೊನೆಯಲ್ಲಿ ಮಂಗಳೂರಿನಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಮಿಕನ ಮಗ ನಾಗಿ ಕಟ್ಟಕಡೆಯ ಕುಟುಂಬದಿಂದ ಬಂದು ಶಿಕ್ಷಣ, ಕಂದಾಯ ಸಚಿವರಾಗಿ ಭೂಮಸೂದೆ ಕಾನೂನಿಗೆ ಹೊಂದಿ ಕೊಂಡು ಆನೇಕರಿಗೆ ಮನೆ ನಿವೇಶನ ಕೊಟ್ಟಿದ್ದಾರೆ.

ಅಕ್ರಮ ಸಕ್ರಮ ಯೋಜನೆಯಲ್ಲಿ ರಾಜ್ಯಾದ್ಯಂತ ಎಕ್ರೆಗಟ್ಟಲೆ ಜಾಗವನ್ನು ಬಡವರಿಗೆ ನೀಡಿದವರು. ಕೇಂದ್ರ ಸಚಿವರಾಗಿ, ವಿಪಕ್ಷ ನಾಯಕರಾಗಿ, ಕಾರ್ಮಿಕ ಸಚಿವರಾಗಿ ಬಡವರ ಸೇವೆ ಮಾಡಿದವರು. ಅವರು ಭಾಷಣ ಮಾಡಿದ ಜಾಗವನ್ನು ಭಾರತೀಯ ಜನತಾ ಪಕ್ಷದವರು ಗಂಗಾಜಲ ಸಿಂಪಡಿಸಿ ಶುದ್ದೀಕರಣ ಮಾಡುವ ಮೂಲಕ ದೇಶದ 144 ಕೋಟಿ ಜನರು ತಲೆತಗ್ಗಿಸುವ ಕೆಲಸ ಮಾಡಿದ್ದಾರೆ. ಇದು ಅವರು ಭಾರತದ ಸಂವಿಧಾನಕ್ಕೆ ಮಾಡಿದ ಅವಮಾನ ಎಂದರು.

ಈ ಪ್ರಕರಣದಲ್ಲಿ ನಾವು ನ್ಯಾಯ ಕೊಡುತ್ತೇವೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಕೇಂದ್ರ ಸಚಿವ ಜೆಪಿ ನಡ್ಡಾ ಹೇಳಿದ್ದರೂ ಅದು ಇನ್ನೂ ಕಾರ್ಯಗತಗೊಂಡಿಲ್ಲ. ಈ ಘಟನೆಯ ಬಗ್ಗೆ ಸಂವಿಧಾನದ 17ನೇ ವಿಧಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆ‌ರ್ ಆಗಿದೆ. ಒಂದು ರೀತಿಯಲ್ಲಿ ‘ಕಳ್ಳನಿಗೆ ರಕ್ಷಣೆ, ಪೊಲೀಸರಿಗೆ ಜೈಲು’ ಎಂಬ ಸ್ಥಿತಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ್ದಾಗಿದೆ’ ಎಂದು ಸೊರಕೆ ಆಪಾದಿಸಿದರು.