ಮಂಗಳೂರು: 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಸಮಗ್ರ ಆರೋಗ್ಯದ ಬಗ್ಗೆ ಸ್ಥಳೀಯ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ 17 ಜೂನ್ 2026ರಂದು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 3:00 ಗಂಟೆಯವರೆಗೆ ಉಳ್ಳಾಲ ಆಯುಷ್ ಘಟಕದಲ್ಲಿ ಯೆನೆಪೋಯ ನ್ಯಾಚುರೋಪಥಿ ಮತ್ತು ಯೋಗಿಕ್ ಸೈನ್ಸ್ ಕಾಲೇಜು ಮತ್ತು ಆಸ್ಪತ್ರೆ, ನರಿಂಗಾಣ ಹಾಗೂ ಆಯುಷ್ ಘಟಕ, ಉಳ್ಳಾಲ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವು ಬೆಳಿಗ್ಗೆ 10:00 ಗಂಟೆಗೆ ಡಾ. ಸಹನಾ, ವೈದ್ಯಾಧಿಕಾರಿ, ಆಯುಷ್ ಉಳ್ಳಾಲ ಅವರ ಸ್ವಾಗತ ಭಾಷಣದೊಂದಿಗೆ ಆರಂಭವಾಯಿತು. ಅವರು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಯೋಗದ ಮಹತ್ವವನ್ನು ವಿವರಿಸಿದರು.
ಬಳಿಕ ಯೆನೆಪೊಯ ನ್ಯಾಚುರೋಪಥಿ ಮತ್ತು ಯೋಗಿಕ್ ಸೈನ್ಸ್ ಕಾಲೇಜು ಮತ್ತು ಆಸ್ಪತ್ರೆ, ನರಿಂಗಾಣದ ಪ್ರಾಧ್ಯಾಪಕರಾದ ಡಾ. ಸೌಮ್ಯ ಅವರು ನಿಯಮಿತ ಯೋಗಾಭ್ಯಾಸದ ಅಗತ್ಯತೆ ಹಾಗೂ ಜೀವನಶೈಲಿ ಸಂಬಂಧಿತ ರೋಗಗಳ ತಡೆಗಟ್ಟುವಿಕೆಯಲ್ಲಿ ಅದರ ಪಾತ್ರದ ಕುರಿತು ಉಪನ್ಯಾಸ ನೀಡಿದರು. ತದನಂತರ ಡಾ.ಅರ್ಪಿತ್ ಕುಮಾರ್, ನಿವಾಸಿ ವೈದ್ಯಾಧಿಕಾರಿ, ಯೆನೆಪೋಯ ಅವರು ೨೦ ನಿಮಿಷಗಳ ಕಾಲ ಯೋಗಾಭ್ಯಾಸ ತರಬೇತಿಯನ್ನು ಸ್ಥಳೀಯರಿಗೆ ನೀಡಿದರು. ಡಾ.ಹಸ್ನಾ, ಯುನಾನಿ ವೈದ್ಯರು, ಉಳ್ಳಾಲ ಮತ್ತು ರಜಾಕ್, ಶಿಬಿರದ ಸಂಯೋಜಕರು, ಯೆನೆಪೋಯ ಇವರು ಕೂಡ ಉಪಸ್ಥಿತರಿದ್ದರು.
ಯೆನೆಪೋಯ ತಂಡದ ವಿದ್ಯಾರ್ಥಿಗಳು ಉಚಿತವಾಗಿ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ಮಾಡಿದರು. ಸ್ಥಳೀಯ ನಿವಾಸಿಗಳನ್ನು ಒಳಗೊಂಡಂತೆ 50ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಉಚಿತ ಆರೋಗ್ಯ ತಪಾಸಣೆ ಹಾಗೂ ವೈದ್ಯಕೀಯ ಸಲಹೆಯ ಪ್ರಯೋಜನ ಪಡೆದರು.
ಈ ಆರೋಗ್ಯ ಶಿಬಿರವು ಯೋಗದ ಮೂಲಕ ತಡೆಗಟ್ಟುವ ಆರೋಗ್ಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ “ಆರೋಗ್ಯಕರ ವಯೋವೃದ್ಧಿಗಾಗಿ ಯೋಗ” ಎಂಬ ಧ್ಯೇಯವನ್ನು ಮತ್ತಷ್ಟು ಬಲಪಡಿಸಿತು. ಶಿಬಿರದ ಬಗ್ಗೆ ಭಾಗವಹಿಸಿದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.

