ದಕ್ಷಿಣ ಕನ್ನಡ : ವಿದ್ಯಾರ್ಥಿಗಳ ಕಲಿಕೆ, ಬೆಳವಣಿಗೆ ಅಷ್ಟೇ ಅಲ್ಲ ತೀವ್ರ ತರದ ಅನಾರೋಗ್ಯಕ್ಕೆ ಕಾರಣವಾಗುವ ರಕ್ತಹೀನತೆ ಸಮಸ್ಯೆ ಗಣನೀಯ ಪ್ರಮಾಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸಿದ ಆರೋಗ್ಯ ತಪಾಸಣೆಯಲ್ಲಿ ಕಂಡುಬಂದಿದೆ.
ದಕ್ಷಿಣ ಕನ್ನಡದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ರಾಜ್ಯ ಸರ್ಕಾರದ ಯೋಜನೆಯಂತೆ ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಿದಾಗಿ ಬರೋಬ್ಬರಿ ನಾಲ್ಕು ಸಾವಿರ ವಿದ್ಯಾರ್ಥಿಗಳಲ್ಲಿ ರಕ್ತ ಹೀನತೆ ಕಂಡು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ 195 ಶಿಕ್ಷಣ ಸಂಸ್ಥೆಗಳಲ್ಲಿರುವ 61,749 ಮಂದಿ ವಿದ್ಯಾರ್ಥಿಗಳ ತಪಾಸಣೆಯಲ್ಲಿ 4,024 ಮಂದಿಗೆ ರಕ್ತ ಹೀನತೆ ಸಮಸ್ಯೆ ಇದೆ. ಇದರಲ್ಲಿ 268 ಮಕ್ಕಳಲ್ಲಿ ಅತಿಯಾಗಿದ್ದರೆ ಉಳಿದಂತೆ 3,740 ಮಕ್ಕಳಲ್ಲಿ ಸಾಧಾರಣ ರೀತಿಯ ಸಮಸ್ಯೆಗಳನ್ನು ಪತ್ತೆ ಹಚ್ಚಲಾಗಿದೆ.
ನವಜಾತ ಶಿಶುಗಳು, ಮಕ್ಕಳು, ಹದಿಹರೆಯದವರು, ಗರ್ಭಿಣಿಯರು, ತಾಯಂದಿರಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆ ನಿವಾರಿಸಲು ‘ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ (ಎಎಂಪಿಕೆ) ಯೋಜನೆಗೆ ಕಳೆದ ವರ್ಷ ರಾಜ್ಯ ಸರಕಾರ ಚಾಲನೆ ನೀಡಿತ್ತು. ಈ ಬಳಿಕ ಪ್ರತಿಯೊಂದು ಜಿಲ್ಲೆಯಲ್ಲೂ ಇದರ ತಪಾಸಣೆ ಕಾರ್ಯ ಆರಂಭಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡಂತೆ ವಿದ್ಯಾರ್ಥಿಗಳ ತಪಾಸಣೆ ನಡೆಸಿದಾಗ ಈ ವಿಷಯ ಬಹಿರಂಗವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ತಾಲೂಕಿನಲ್ಲಿ 37,735 ವಿದ್ಯಾರ್ಥಿಗಳ ಗುರಿಯನ್ನು ಇಟ್ಟುಕೊಂಡು 22,232 ಮಂದಿಯನ್ನು ತಪಾಸಣೆ ನಡೆಸಿದಾಗ ಇದರಲ್ಲಿ 2085 ವಿದ್ಯಾರ್ಥಿಗಳಲ್ಲಿ ಸಾಧಾರಣ ಹಾಗೂ 2315 ಕೊಂಚ ತೀವ್ರ ಹಾಗೂ 207 ಮಂದಿಯಲ್ಲಿ ತೀವ್ರ ರೀತಿಯ ರಕ್ತ ಹೀನತೆ ಸಮಸ್ಯೆ ಕಾಣಿಸಿಕೊಂಡಿದೆ. ಒಟ್ಟು ಜಿಲ್ಲೆಯಲ್ಲಿ ತೀವ್ರ ರಕ್ತ ಹೀನತೆ ಸಮಸ್ಯೆ ಇರುವುದರಲ್ಲಿಯೇ ಮಂಗಳೂರಿನಲ್ಲೇ ಹೆಚ್ಚಿದೆ. ಉಳಿದಂತೆ ಬಂಟ್ವಾಳದ 28 ಶಿಕ್ಷಣ ಸಂಸ್ಥೆಗಳಲ್ಲಿ 6810 ಮಂದಿಯನ್ನು ಪರೀಕ್ಷೆ ನಡೆಸಿದಾಗ 8 ಮಂದಿಯಲ್ಲಿ ತೀವ್ರ, 462 ಮಂದಿಯಲ್ಲಿ ಕೊಂಚ ತೀವ್ರತೆ ಹಾಗೂ 639 ಮಂದಿಯಲ್ಲಿಸಾಧಾರಣ ರಕ್ತ ಹೀನತೆ ಸಮಸ್ಯೆ ಪತ್ತೆಯಾಗಿದೆ.
ಬೆಳ್ತಂಗಡಿಯಲ್ಲಿ 24 ಶಿಕ್ಷಣ ಸಂಸ್ಥೆಗಳಲ್ಲಿ 5323 ಮಂದಿ ಪರೀಕ್ಷೆಯಲ್ಲಿ 8 ಮಂದಿಯಲ್ಲಿ ತೀವ್ರ ಸಮಸ್ಯೆ ಕಾಣಿಸಿದರೆ ಉಳಿದಂತೆ 232 ಮಂದಿಯಲ್ಲಿ ಕೊಂಚ ತೀವ್ರ ಹಾಗೂ 346 ಮಂದಿಯಲ್ಲಿ ಸಾಧಾರಣ ಸಮಸ್ಯೆ ಇದೆ. ಪುತ್ತೂರು ಭಾಗದಲ್ಲಿ 27 ಶಿಕ್ಷಣ ಸಂಸ್ಥೆಗಳಲ್ಲಿ 5822 ಮಂದಿಯಲ್ಲಿ 510 ಮಂದಿಗೆ ಸಾಧಾರಣ, 277 ಕೊಂಚ ತೀವ್ರತೆ, ಮೂವರಲ್ಲಿ ತೀವ್ರ ಸಮಸ್ಯೆ ಕಾಣಿಸಿಕೊಂಡಿದೆ. ಸುಳ್ಯದಲ್ಲಿ 16 ಶಿಕ್ಷಣ ಸಂಸ್ಥೆಗಳಲ್ಲಿ 3295 ಮಂದಿಯಲ್ಲಿ 444 ಮಂದಿಯಲ್ಲಿ ಸಾಧಾರಣ ಹಾಗೂ 454 ಮಂದಿಯಲ್ಲಿ ಕೊಂಚ ತೀವ್ರ ಹಾಗೂ 42 ಮಂದಿಯಲ್ಲಿ ತೀವ್ರ ಸಮಸ್ಯೆಯಿದೆ.
ಆರೋಗ್ಯ ಇಲಾಖೆ ಮಕ್ಕಳಲ್ಲಿರುವ ರಕ್ತಹೀನತೆ ಸಮಸ್ಯೆ ನಿವಾರಣೆಗೆ 90 ದಿನಗಳ ಕಾಲ ಎರಡು ಮಾತ್ರೆಗಳನ್ನು ನೀಡುವ ಕೆಲಸವನ್ನು ಕೈಗೊಂಡಿದ್ದು, ಇದರಿಂದ ರಕ್ತಹೀನತೆ ಸಮಸ್ಯೆ ಕೊಂಚ ಮಟ್ಟಿಗೆ ನಿವಾರಣೆಯಾಗಿದೆ ಎನ್ನುವುದು ಇಲಾಖೆ ಮಾತು. ಉಳಿದಂತೆ ತೀವ್ರ ರೀತಿಯ ಸಮಸ್ಯೆ ಇರುವ ಮಂದಿಗೆ ಆರೋಗ್ಯ ಇಲಾಖೆ ಹೆಚ್ಚಿನ ಚಿಕಿತ್ಸೆಗೂ ಮುಂದಾಗಿದೆ.

