ಉಳ್ಳಾಲ; ಮಂಗಳೂರು: ಸಾಂಬಾರಿನಲ್ಲಿ ಜಿರಳೆ ಇದೆಯೆಂದು ದೂರು ನೀಡಿದ್ದಾರೆಂಬ ನೆಪದಲ್ಲಿ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ.ಪ್ರವೀಣ್ ಕುಮಾರ್ ಸರ್ಕಾರಿ ರಜಾ ದಿನದಂದೇ ತೊಕ್ಕೊಟ್ಟಿನ ವೃಂದಾವನ ಹೊಟೇಲಿಗೆ ದಾಳಿ ನಡೆಸಿದ್ದಾರೆ. ಅಡುಗೆ ಕೋಣೆಯಲ್ಲಿ ತಪಾಸಣೆ ನಡೆಸಿದ್ದು, ಅಲ್ಲಿ ಜಿರಳೆ ಹರಿದಾಡುತ್ತಿದೆಯೆಂದು ಹೇಳಿ ಶುಚಿತ್ವ ಕಾಪಾಡದ ಹೊಟೇಲ್ ಮಾಲಕರಿಗೆ ನೋಟೀಸು ನೀಡಿ, ಎಡಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಹೇಳಿ ನಿರ್ಗಮಿಸಿದ್ದಾರೆ.
ಇತ್ತೀಚೆಗೆ ಮಂಗಳೂರಿನ ಮೆಕ್‌ಡೊನಾಲ್ಡ್ ಕೆಎಫ್‌ಸಿ ಹಾಗೂ ಕೆಲವು ಪ್ರಮುಖ ರೆಸ್ಟೋರೆಂಟ್‌ಗಳ ಮೇಲೆ ಡಾ.ಪ್ರವೀಣ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದ್ದು ಭಾರೀ ಸುದ್ದಿಯಾಗಿತ್ತು. ಇದೀಗ ಈದ್ ಮಿಲಾದ್ ರಜಾ ದಿನವೂ ಡಾ.ಪ್ರವೀಣ್ ಕುಮಾರ್ ಆಹಾರ ಇಲಾಖೆಯ ಕಾರು ಚಾಲಕನೊಂದಿಗೆ ಒಬ್ಬಂಟಿಯಾಗಿ ತೊಕ್ಕೊಟ್ಟಿನ ವೃಂದಾವನ ಹೊಟೇಲ್ ಮೇಲೆ ದಾಳಿ ನಾಟಕ ಮಾಡಿದ್ದು ತಪಾಸಣೆ ನಡೆಸಿದ್ದಾರೆ.
ಮಧ್ಯಾಹ್ನ 1.30 ಗಂಟೆಗೆ ಪ್ರವೀಣ್ ಅವರು ತನ್ನ ಇಲಾಖೆಯ ಕಾರು ಚಾಲಕ ಲೋಕೇಶ್ ಅವರೊಂದಿಗೆ ಹೊಟೇಲ್ ಗೆ ಬಂದಿದ್ದು, ಶಟರ್ ಹಾಕಿ ತಪಾಸಣೆ ಕೈಗೊಂಡಿದ್ದಾರೆ. ಸಾಂಬಾರಿನಲ್ಲಿ ಜಿರಳೆ ಇರುವ ದೂರಿಗೆ ಜಿಲ್ಲಾ ಮಟ್ಟದ ಅಧಿಕಾರಿಯೇ ಶೋಧ ಕಾರ್ಯಕ್ಕೆ ಬಂದಿರುವುದು ಸ್ಥಳೀಯರನ್ನ ಬೆರಗುಗೊಳಿಸಿದೆ.

