ಮಂಗಳೂರು: ದ.ಕ.ಜಿಲ್ಲೆಯ ಕೆಲ ಹಿಂದೂ ನಾಯಕರು, ಕಾರ್ಯಕರ್ತರ ಮೇಲೆ ಪೊಲೀಸ್ ಇಲಾಖೆ ಎಫ್ಐಆರ್ ದಾಖಲಿಸಿದ್ದು, ಕೆಲವರನ್ನು ಗಡಿಪಾರಿಗೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರ ನಿಯೋಗ ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ದ.ಕ.ಜಿಲ್ಲಾ ಎಸ್ಪಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದೆ.
ಅದಕ್ಕಿಂತ ಮೊದಲು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ದ.ಕ ಜಿಲ್ಲೆಯ ಆರು ಮಂದಿ ಬಿಜೆಪಿ ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಹರೀಶ್ ಪೂಂಜಾ, ರಾಜೇಶ್ ನಾಯ್ಕ್, ಉಮಾನಾಥ್ ಕೋಟ್ಯಾನ್, ಭಾಗೀರಥಿ ಮುರುಳ್ಯ, ವೇದವ್ಯಾಸ ಕಾಮತ್ ಸೇರಿದಂತೆ ಎಂಎಲ್‌ಸಿ ಕಿಶೋರ್ ಕುಮಾರ್ ಪುತ್ತೂರು ಸೇರಿ ಕೆಲ ನಾಯಕರು ಭಾಗಿಯಾಗಿದ್ದರು.
ಈ ತುರ್ತು ಸಭೆಯಲ್ಲಿ ದ.ಕ. ಜಿಲ್ಲಾ ಎಸ್ಪಿ ಡಾ.ಅರುಣ್ ಕೆ. ಹಾಗೂ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿಯವರನ್ನು ಭೇಟಿಯಾಗುವ ನಿರ್ಧಾರ ಕೈಗೊಳ್ಳಲಾಯಿತು. ಅದರಂತೆ ಮೊದಲು ಎಸ್ಪಿ ಡಾ.ಅರುಣ್ ಕೆ.ಯವರನ್ನು ಭೇಟಿ ಮಾಡಿದ ನಿಯೋಗ ಅವರೊಂದಿಗೆ ಸುದೀರ್ಘ ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿತು. ಬಳಿ ಕ ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿ ಸುಧೀರ್ ಕುಮಾರ್ ರೆಡ್ಡಿಯವರೊಂದಿಗೆ ಮಾತುಕತೆ ನಡೆಸಿತು.

