ಮಂಗಳೂರು: ನಗರ ದಕ್ಷಿಣ ಮಂಡಲ ಭಾರತೀಯ ಜನತಾ ಪಾರ್ಟಿಯ ವತಿಯಿಂದ, ಕುಲಶೇಖರದ ಮೆಸ್ಕಾಂ ಉಪವಿಭಾಗ ಕಚೇರಿ ಎದುರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೋರಾದ ಪ್ರತಿಭಟನೆ ನಡೆಯಿತು.
ವಿದ್ಯುತ್ ಸರಬರಾಜು ನಿಗಮಗಳ ನೌಕರರಿಗೆ ಪಿಂಚಣಿ ಮತ್ತು ಗ್ರಾಚ್ಯುಟಿ ನೀಡುವ ಬಗ್ಗೆ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಖಂಡಿಸಿ, ಗ್ರಾಹಕರಿಂದಲೇ ಹಣ ವಸೂಲಿ ಮಾಡುವ ಮೂಲಕ ‘ಹಗಲು ದರೋಡೆಗೆ’ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂಬ ಆರೋಪವನ್ನು ಬಿಜೆಪಿ ಮುಖಂಡರು ಮುಂದಿಟ್ಟರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್, ಕಾಂಗ್ರೆಸ್ ಸರ್ಕಾರದ ತೀರ್ಮಾನವನ್ನು ತೀವ್ರವಾಗಿ ಟೀಕಿಸಿದರು. ಅವರು, ‘ಇದು ಜನತೆಯ ಮೇಲೇ ಹೊರೆ ಹಾಕುವ ರಾಜಕೀಯ’ ಎಂದು ಅಭಿಪ್ರಾಯಪಟ್ಟರು.
ಕಾರ್ಯಕರ್ತರು ‘ಕಾಂಗ್ರೆಸ್ ಸರಕಾರಕ್ಕೆ ದಿಕ್ಕಾರ’ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಮಾಜಿ ಕಾರ್ಪೊರೇಟರ್‌ಗಳು ಹಾಗೂ ಬಿಜೆಪಿ ಪಕ್ಷದ ಪ್ರಮುಖ ಮುಖಂಡರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.
ಬಿಜೆಪಿ ಇದರ ವಿರುದ್ಧ ಹೋರಾಟ ಮುಂದುವರಿಸಲಿದೆ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ, ಮೆಸ್ಕಾಂ ಹಾಗೂ ರಾಜ್ಯ ಸರ್ಕಾರ ಈ ಕುರಿತು ಪ್ರತಿಕ್ರಿಯೆ ನೀಡಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.

