ಮಂಗಳೂರು ; ಬೆಂಗಳೂರಿನಿಂದ ಮಂಗಳೂರು ನಗರಕ್ಕೆ ನಿಷೇದಿತ ಮಾದಕ ವಸ್ತುವಾದ ಎಂಡಿಎಂಎ ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದ ನೈಜೀರಿಯ ಪ್ರಜೆ ಸಹಿತ ಇಬ್ಬರು ಡ್ರಗ್ ಪೆಡ್ಡರ್ ಗಳನ್ನು ಬಂಧಿಸಿ 200 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಮೂಲತಃ ಬೆಂಗಳೂರಿವನಾಗಿದ್ದು, ಮೈಸೂರಿನಲ್ಲಿ ನೆಲೆಸಿರುವ ದರ್ಶನ್ ಕೆ.ಜಿ. (25), ಬೆಂಗಳೂರಿನಲ್ಲಿ ವಾಸವಿದ್ದ ನೈಜೀರಿಯಾ ಪ್ರಜೆ ಚಿಕ ಜೋಸೆಫ್ (26) ಬಂಧಿತರು. ಇತ್ತೀಚೆಗೆ ಬಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಟ್ಬಾಲ್ ಎಂಬಾತನನ್ನು ಬಟ್ಟೆ ಪೊಲೀಸರು ದಸ್ತಗಿರಿ ಮಾಡಿದ್ದು,
ಈ ಪ್ರಕರಣದಲ್ಲಿ ಆರೋಪಿಗಳಿಗೆ ಮಾದಕ ವಸ್ತುವಾದ ಎಂಡಿಎಂಎ ಪೂರೈಕೆ ಮಾಡುತ್ತಿದ್ದ ಡ್ರಗ್ ಪೆಡ್ಡರ್ಗಳ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಮಂಗಳೂರಿನಿಂದ ಹಾಗೂ ಬೆಂಗಳೂರಿನಿಂದ ಮಾದಕ ವಸ್ತುವಾದ ಎಂಡಿಎಂಎ ಸಾಗಾಟ/ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಬೆಂಗಳೂರಿನಲ್ಲಿದ್ದುಕೊಂಡು ಇನ್ನೋರ್ವ ಆರೋಪಿ ದರ್ಶನ್ ಎಂಬಾತನ ಜೊತೆ ಸೇರಿ ಮಂಗಳೂರಿನ ವಿವಿಧ ವ್ಯಕ್ತಿಗಳಿಗೆ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಎಂಡಿಎಂಎ ಸಾಗಾಟ ಹಾಗೂ ಮಾರಾಟ ಮಾಡುತ್ತಿದ್ದರು. ಆರೋಪಿ ಚಿಕ ಜೋಸೆಫ್ ಇಝಿ ಎಂಬಾತನು 2023 ನೇ ಮೇ ತಿಂಗಳಲ್ಲಿ ಭಾರತಕ್ಕೆ ಉದ್ಯೋಗ ವೀಸಾದಲ್ಲಿ ಬಂದಿದ್ದನು.
ಇಲ್ಲಿ ಬೆಂಗಳೂರಿನಲ್ಲಿ ಯಲಹಂಕದಲ್ಲಿ ನೈಜೀರಿಯ ಪ್ರಜೆಯ ಹೇರ್ ಕಟ್ಟಿಂಗ್ ಉದ್ಯೋಗ ಮಾಡುತ್ತಿದ್ದು, ಈತನ ವಿರುದ್ಧ ಬೆಂಗಳೂರು ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುಮಾರು 4 ತಿಂಗಳ ಹಿಂದೆ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು. ಈ ಮಾದಕ ವಸ್ತು ಮಾರಾಟ/ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.
ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ ಅವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಎಚ್.ಎಂ. ಪಿಎಸ್ಐ ಸುದೀಪ್ ಎಂ.ವಿ., ಎಎಸ್ಐ ರಾಮ ಪೂಜಾರಿ ಮತ್ತು ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.

