ಮಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು, ಸಹಕಾರ ಇಲಾಖೆ ದ.ಕ ಜಿಲ್ಲೆ ಇವರ ಸಹಕಾರದೊಂದಿಗೆ ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಲಿ. ಮಂಗಳೂರು ಇವರ ನೇತೃತ್ವದಲ್ಲಿ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಪುತ್ತೂರು ಮತ್ತು ಕಡಬ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೂತನವಾಗಿ ಆಯ್ಕೆಯಾದ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮವು ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಿವಸದನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ನ ಅಚ್ಚುತ ಮೂಡತ್ತಾಯರವರು ಮಾತನಾಡಿ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮವು ಹೆಚ್ಚಾಗಿ ಮಂಗಳೂರಿನಲ್ಲಿ ನಡೆಯುತ್ತಿತ್ತು.

ಅದರೆ ಈ ಬಾರಿ -ಶಶಿಕುಮಾರ್ ರೈ ಬಾಲ್ಯೊಟ್ಟು ರವರು ಯೂನಿಯನ್‌ನ ಜಿಲ್ಲಾಧ್ಯಕ್ಷರಾದ ಬಳಿಕ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಹಳ್ಳಿಗೆ ತರುವ ಮೂಲಕ ಈ ಭಾಗದ ಪುತ್ತೂರು-ಕಡಬ ತಾಲೂಕಿನ ಸಹಕಾರ ಸಂಘದ ನಿರ್ದೇಶಕರುಗಳಿಗೆ, ಸಿಬ್ಬಂದಿಗಳಿಗೆ ಹೆಚ್ಚಿನ ಅನುಕೂಲವಾಗಿದೆ. ಪ್ರಮುಖವಾಗಿ ಸಹಕಾರಿ ಕ್ಷೇತ್ರದಲ್ಲಿ ಎಷ್ಟೇ ವರ್ಷದ ಅನುಭವ ಇದ್ದರೂ ಕೂಡ ನಾವು ಮತ್ತೆ ಮತ್ತೆ ಅಪ್‌ಡೇಟ್ ಆಗಬೇಕಾಗುತ್ತದೆ.

ಯಾಕೆಂದರೆ ಸಹಕಾರ ಕ್ಷೇತ್ರದಲ್ಲಿ ಕಾನೂನಿನ ಬದಲಾವಣೆ, ವ್ಯವಸ್ಥೆಯ ಬದಲಾವಣೆ, ಹೊಸ ಹೊಸ ಸುತ್ತೋಲೆಗಳು, ನಿಯಮಗಳು ಬರುತ್ತಲೇ ಇರುತ್ತದೆ, ಆ ನಿಟ್ಟಿನಲ್ಲಿ ಇಂತಹ ತರಬೇತಿ ಕಾರ್ಯಕ್ರಮದ ಮೂಲಕ ಸಹಕಾರಿ ಶಿಕ್ಷಣದ ಜತೆಗೆ ನಾವು ಮತ್ತಷ್ಟು ಅಪ್‌ಡೇಟ್ ಆಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಭಾಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರೂ ಆಗಿರುವ ಶಶಿಕುಮಾರ್ ರೈ ಬಾಲೊಟ್ಟುರವರು ಮಾತನಾಡಿ ಜಿಲ್ಲಾ ಸಹಕಾರ ಯೂನಿಯನ್ ಮೂಲಕ ಜಿಲ್ಲೆಯಲ್ಲಿ 5 ಕಡೆಗಳಲ್ಲಿ ತರಬೇತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಿದ್ದೇವೆ. ಸಹಕಾರ ಸಂಘಗಳನ್ನು ಸಹಕಾರಿ ವ್ಯವಸ್ಥೆಯನ್ನು ಬಲಪಡಿಸುವುದೇ ತರಬೇತಿ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಸಹಕಾರ ಸಂಘದ ನಿರ್ದೇಶಕರುಗಳಿಗೆ, ಸಿಬ್ಬಂದಿಗಳಿಗೆ ಸೂಕ್ತವಾದ ತರಬೇತಿ, ಮಾರ್ಗದರ್ಶನವನ್ನು ನೀಡುವ ಮೂಲಕ ಗ್ರಾಹಕರಿಗೆ, ಸದಸ್ಯರುಗಳಿಗೆ ಉತ್ತಮ ರೀತಿಯ ಸೇವೆಯನ್ನು ನೀಡಲು ಸಹಕಾರಿಯಾಗಲಿದೆ ಎಂದು ಹೇಳಿದರು.

ನಿಂತು ಹೋಗಿರುವ ಸಹಕಾರ ಪತ್ರಿಕೆಯನ್ನು ಮತ್ತೆ ಎಪ್ರಿಲ್‌ನಲ್ಲಿ ಆರಂಭ ಮಾಡುವುದರ ಜತೆಗೆ, ಜಿಲ್ಲಾ ಸಹಕಾರ ಯೂನಿಯನ್‌ಗೆ ಕಛೇರಿ ನಿರ್ಮಾಣ ಸೇರಿದಂತೆ ಮುಂದಿನ ಮಹಾಸಭೆಯಲ್ಲಿ ಯೂನಿಯನ್ನಿನಿಂದ ಸಹಕಾರ ಸಂಘಗಳಿಗೆ ಡಿವಿಡೆಂಡ್‌ನ್ನು ನೀಡುವಂತಹ ಸಂತೋಷದಾಯಕ ಸುದ್ದಿ ಹೊರಬರಲಿದೆ ಎಂದು -ಶಶಿಕುಮಾರ್ ರೈ ಬಾಲ್ಯೊಟ್ಟು ದವರು ಹೇಳಿದರು.

ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಮಂಜುನಾಥ ಎನ್.ಎಸ್‌ರವರು ಮಾತನಾಡಿ ಸಹಕಾರ ಸಂಘದ ನಿರ್ದೇಶಕರಾದವರು ಮೊದಲು ಸಂಘದ ಬೈಲಾ ಪ್ರತಿಯನ್ನು ತೆಗೆದುಕೊಂಡು ಅಧ್ಯಯನ ಮಾಡಬೇಕು ಆಗ ಮಾತ್ರ ನಾವು ಸಂಘದ ಬಗ್ಗೆ ಸಹಕಾರ ಕ್ಷೇತ್ರದ ಬಗ್ಗೆ ಕೆಲಸ ಮಾಡಲು ಸುಲಭವಾಗುತ್ತದೆ, ಇತ್ತೀಚಿನ ದಿನಗಳಲ್ಲಿ ದಿನದಿಂದ ದಿನಕ್ಕೆ ಮಾತ್ರವಲ್ಲ ಕ್ಷಣದಿಂದ ಕ್ಷಣಕ್ಕೆ ಅಕ್ಟ್ ಬದಲಾವಣೆ ಆಗುತ್ತಿರುತ್ತದೆ, ಹೊಸ ಹೊಸ ನಿಯಮಗಳು ಸೇರ್ಪಡೆಯಾಗುತ್ತಿರುತ್ತದೆ, ಹಾಗಾಗಿ ನಾವು ಬೈಲಾ, ಆಕ್ಟ್ ನಿಯಮಗಳನ್ನು ತಿಳಿದುಕೊಂಡು ಕಾನೂನಾತ್ಮಕವಾಗಿಯೇ ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡಬೇಕಾಗುತ್ತದೆ ಹಾಗಾಗಿ ಇಂತಹ ತರಬೇತಿ ಕಾರ್ಯಕ್ರಮಗಳು ತುಂಬಾ ಅವಶ್ಯವಾಗಿದೆ ಎಂದು ಹೇಳಿದರು.

ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕ ಸಂಜೀವ ಪೂಜಾರಿ, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಮಂಜುನಾಥ ರೈ ಸಾಂತ್ಯರವರು ಹಾಗೂ ಪುತ್ತೂರು ತಾಲೂಕು ಸಹಕಾರಿ ಯೂನಿಯನ್‌ನ ಅಧ್ಯಕ್ಷ ಪ್ರವೀಣ್ ರೈ ಮೇನಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಹಕಾರ ಕಾಯ್ದೆ ಸ್ವರೂಪ, ಆಡಳಿತ ಮಂಡಳಿ ಸದಸ್ಯರ ಹಕ್ಕು ಮತ್ತು ಜವಾಬ್ದಾರಿ ವಿಷಯದಲ್ಲಿ ದ.ಕ ಜಿಲ್ಲೆ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿಯ ಅಧೀಕ್ಷಕ ಎನ್ ಜೆ ಗೋಪಾಲ್ ಮತ್ತು ಐಎಂಬಿಪಿ, ಪಿಎಲ್‌ಗಳ ವಿಷಯದಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್‌ನ ನಿವೃತ್ತ ಸಿಇಓ ವಿಶ್ವನಾಥ ನಾಯರ್‌ರವರು ತರಬೇತಿ ನೀಡಿದರು.

ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಪಿ.ಜಿಯವರು ಸ್ವಾಗತಿಸಿ, ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ ಹಿರೇಮಠರವರು ವಂದಿಸಿದರು. ಕಾವು ಸಹಕಾರ ಸಂಘದ ಸಿಬ್ಬಂದಿ ಸುನೀಲ್ ನಿಧಿಮುಂಡ ಕಾರ್ಯಕ್ರಮ ನಿರ್ವಹಿಸಿದರು.