ಮಂಗಳೂರು : ಪ್ರಸ್ತುತ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಮ್ಮ ಸಾಂಪ್ರದಾಯಿಕ ಪ್ರವಾಸಿ ವಾಹನಗಳ ಮೇಲೆ ಬಹಳಷ್ಟು ತಾರತಮ್ಯ ಹಾಗೂ ಅವೈಜ್ಞಾನಿಕ ಪಾರ್ಕಿಂಗ್ ದರಗಳನ್ನು ವಸೂಲಿ ಮಾಡುತ್ತಿದ್ದು ದಿನನಿತ್ಯ ನಮ್ಮ ದುಡಿಮೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ.
ಸರ್ಕಾರದ ಎಲ್ಲಾ ತೆರಿಗೆಗಳನ್ನು ಪಾವತಿಸಿ, ಮೋಟಾರು ವಾಹನ ಕಾಯ್ದೆಯ ಎಲ್ಲಾ ನಿಯಮಗಳನ್ನು ಪಾಲಿಸಿ ಸಂಚರಿಸುತ್ತಿರುವ ಪ್ರವಾಸಿ ವಾಹನಗಳ ಮೇಲೆ ಅನಗತ್ಯ ಕ್ರಮಗಳನ್ನು ಹೇರುತ್ತಿದ್ದು ಇನ್ನೊಂದೆಡೆ ಖಾಸಗಿ ವಾಹನಗಳಿಗೆ ಎಲ್ಲಾ ರೀತಿಯ ಸವಲತ್ತು ನೀಡಿ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಖಂಡನೀಯ.
ಖಾಸಗಿ ವಾಹನಗಳಿಗೆ ಡ್ರಾಪ್ ಮತ್ತು ಪಿಕಪ್ ವಿಚಾರದಲ್ಲಿ ಹತ್ತು ನಿಮಿಷ ಉಚಿತವಾಗಿ ನೀಡಿ ತದನಂತರ ರೂ. 100/- ದರವನ್ನು ನಿಗದಿ ಪಡಿಸಲಾಗಿದೆ. ಆದರೆ ಪ್ರವಾಸಿ ವಾಹನಗಳಿಗೆ ಪ್ರಯಾಣಿಕರ ಪಿಕಪ್ ಸಮಯದಲ್ಲಿ ಒಂದು ನಿಮಿಷವೂ ಉಚಿತ ಅವಕಾಶ ನೀಡದೆ ಲಘು ವಾಹನಗಳಿಗೆ ದುಪ್ಪಟ್ಟು ದರ ರೂ. 180/- ಹಾಗೂ ಮ್ಯಾಕ್ಸಿ ಕ್ಯಾಬ್ಗಳಿಗೆ ರೂ. 500 ರಿಂದ 600/- ವರೆಗೆ (ಹೆಚ್ಚುವರಿ) ದರ ವಸೂಲಿ ಮಾಡಲಾಗುತ್ತಿದೆ. ಇದು ಹಿಂದಿನ ದರಕ್ಕೆ ಹೋಲಿಸಿದರೆ ಮೂರು ಪಟ್ಟು ಅಧಿಕವಾಗಿರುತ್ತದೆ.
ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಹಾಗೂ ನಿರ್ಗಮನ ದ್ವಾರದ ಬಳಿ ಪ್ರವಾಸಿ ವಾಹನಗಳಿಗೆ ಪ್ರತ್ಯೇಕ ಸಾಲನ್ನು ನಿಗದಿ ಪಡಿಸಲಾಗಿದ್ದು, ನಿರ್ಗಮನ ದ್ವಾರದಲ್ಲಿ ನಮಗೆ ಕಾಯ್ದಿರಿಸಿದ ಸಾಲಿನಲ್ಲಿ ಖಾಸಗಿ ವಾಹನಗಳಿಗೂ ಸಂಚಾರಕ್ಕೆ ಅವಕಾಶ ನೀಡುವ ಮೂಲಕ ಅನಗತ್ಯವಾಗಿ ಶುಲ್ಕ ಪಾವತಿಸುವ ಅನಿವಾರ್ಯತೆ ಪ್ರವಾಸಿ ವಾಹನಗಳಿಗೆ ಸೃಷ್ಟಿಯಾಗುತ್ತಿದ್ದು ಮತ್ತು ಇತರ ಬೇಡಿಕೆಗಳನ್ನ ಮುಂದಿಟ್ಟು ಆಗಸ್ಟ್ ೪ ರಂದು ಕಾವೂರು ಸರ್ಕಲ್ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ ಎಂದು ಸಂಘಟಕರಾದ ಆನಂದ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನ ನೀಡಿದರು.

