ಬಂಟ್ವಾಳ: ಫರಂಗಿಪೇಟೆ ಸಮೀಪದ ಕಿದೆಬೆಟ್ಟು ಪದ್ಮನಾಭ ಮಡಿವಾಳ ಅವರ ಮಗ ಪಿಯುಸಿ ವಿದ್ಯಾರ್ಥಿ ದಿಗಂತ್ ‌ಅವರ ನಿಗೂಡ ನಾಪತ್ತೆಯಾಗಿ ಇಂದಿಗೆ 5 ದಿನಗಳು ಕಳೆದರೂ ಪೋಲಿಸ್ ಇಲಾಖೆ ಹಾಗೂ ಸರಕಾರದ ಯಾವುದೇ ರೀತಿಯ ಕಾರ್ಯಚರಣೆ ಯಶಸ್ವಿ ಕಾಣದೆ ಇರುವುದರಿಂದ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಫರಂಗಿಪೇಟೆ ಜಂಕ್ಷನ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು, ಪ್ರತಿಯೊಬ್ಬ ತಂದೆ ತಾಯಿ ಆತಂಕದಲ್ಲಿರಬೇಕಾದ ಅನಿವಾರ್ಯ ‌ಪರಿಸ್ಥಿತಿ ಇದೆ. ಇದೊಂದು ಘಟನೆ ಅಲ್ಲ, ನಾನು ಸಂಸದನಾದ ಬಳಿಕ ಅನೇಕ ‌ಘಟನೆ ನಡೆದಿದೆ. ಈ ಬಗ್ಗೆ ಪೋಲೀಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಮಾತನಾಡಿದ್ದೆ. ಗಾಂಜಾ ವಿರುದ್ಧ ಪೋಲೀಸರು ತನಿಖೆ ಮುಂದುವರಿಸಿ ಸೂಕ್ತವಾದ ‌ಕಾನೂನು ಕ್ರಮ ಕೈಗೊಂಡರೆ ಇಂತಹ ಘಟನೆಗಳು ಮರುಕಳಿಸಲು ಸಾಧ್ಯವಿಲ್ಲ. ಡ್ರಗ್ ಮತ್ತು ಗಾಂಜಾ ಎಂಬ ವಿಷಕಾರಿಯ ವಿರುದ್ದ ಪೋಲಿಸ್ ಇಲಾಖೆ ಟೊಂಕಟ್ಟಿ ನಿಂತು ಹಾವಳಿಯನ್ನು ಬೇರು ಸಹಿತ ಕಿತ್ತೊಗೆದು ಮುಂದಾದರೆ ಹದಿಹರೆಯದ ಬಾಲಕ ಬಾಲಕಿಯರ ನಾಪತ್ತೆ ಪ್ರಕರಣಕ್ಕೆ ಬ್ರೇಕ್ ಬೀಳುತ್ತದೆ ಎಂದು ತಿಳಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಸಕ ಭರತ್ ಶೆಟ್ಟಿ ಅವರು, ದಾರಿಯಲ್ಲಿ ‌ನಡೆದುಕೊಂಡು ಹೋಗಲು ಸಾದ್ಯವಾಗದೆ ಇರುವ ಬಗ್ಗೆ ಅನೇಕ ಮಹಿಳೆಯರು ‌ದೂರು ನೀಡಿದ್ದಾರೆ. ಆದರೆ ಪೋಲೀಸ್ ಇಲಾಖೆಯಿಂದ ಯಾವುದೇ ಸ್ಪಂದನೆ ಇಲ್ಲ, ಪೋಲೀಸ್ ಇಲಾಖೆಯ ಮೇಲೆ ಗೌರವ ಕಳೆದುಹೋಗಿದೆ ಎಂದರು. ಇದೀಗ ಯುವಕರು ಇದರ ವಿರುದ್ದ ಹೋರಾಟ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ. ಹಿಂದೂ ಯುವಕ ಯುವತಿ ನಾಪತ್ತೆ ಹಿಂದೆ ಪೋಲಿಸ್ ಇಲಾಖೆ ಮೌನವಾಗಿ ಕುಳಿತುಕೊಂಡರೆ ನಾವು ನಿಮ್ಮ ಕೆಲಸ ಮಾಡಬೇಕಾಗುತ್ತದೆ  ಎಂದ ಅವರು, ಕಾನೂನು ಸುವ್ಯವಸ್ಥೆ ಹದಗೆಡುವ ಮುಂಚೆ, ಕಾನೂನನ್ನು ಕೈಗೆ ತೆಗೆದುಕೊಳ್ಳುವ ಮುಂಚೆ ಇಲಾಖೆ ಎಚ್ಚೆತ್ತುಕೊಳ್ಳುವಂತೆ ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಅವರು, ವಿದ್ಯಾರ್ಥಿಯ ನಾಪತ್ತೆ ಪ್ರಕರಣವನ್ನು ಪೋಲೀಸರು ಆದಷ್ಟು ಬೇಗ ಪತ್ತೆಹಚ್ಚಬೇಕು. ಘಟನೆ ಆದ ತಕ್ಷಣವೇ ಬಾಲಕನ ಪೋಷಕರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪೋಲೀಸರು ಆ ಸಮಯದಲ್ಲಿ ಕೊಂಚ ನಿರ್ಲಕ್ಷ್ಯ ಮಾಡಿದ್ದಾರೆ. ಇದರಿಂದಾಗಿ ಘಟನೆ ನಡೆದು 5 ದಿನವಾದರೂ ಬಾಲಕ ಪತ್ತೆಯಾಗಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಗಾಂಜಾ ಮಾಫಿಯಾ ಮಿತಿ ಮೀರಿದೆ. ಈ ವ್ಯವಸ್ಥೆಯನ್ನು ಮಟ್ಟ ಹಾಕುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರು, ನಾಪತ್ತೆಯಾದ ಬಾಲಕನನ್ನು ತಕ್ಷಣವೇ ಪೋಲೀಸರು ಪತ್ತೆ ಹಚ್ಚಬೇಕು.ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಹಿಂದೂ ಮುಖಂಡರು,ಬಿಜೆಪಿ ನಾಯಕರಿಗೆ ಭದ್ರತೆಯಿಲ್ಲದಂತಾಗಿದೆ. ಪರಂಗಿಪೇಟೆ ಪರಿಸರ ಗಾಂಜಾ ಮಾಫಿಯಾ ಹೆಚ್ಚಾಗಿದೆ.ಈ ಹಿಂದೆಯೂ ಇಲ್ಲಿ ಬಿಜೆಪಿ ಮುಖಂಡನಿಗೆ ಮಾರಣಾಂತಿಕ ಹಲ್ಲೆಯಾಗಿತ್ತು. ಇದೀಗ ಮತ್ತೆ ಬಾಲಕ ನಾಪತ್ತೆಯಾಗಿ ಐದು ದಿನಗಳು ಕಳೆದಿವೆ. ಎರಡು ದಿನಗಳಲ್ಲಿ ಬಾಲಕನ ನಾಪತ್ತೆ ಪ್ರಕರಣ ಭೇಧಿಸದಿದ್ದರೆ ಉಗ್ರ ಪ್ರತಿಭಟನೆ ಮಾಡುತ್ತೇವೆ. ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಪ್ರತಿಭಟನೆಯ ಕಿಡಿ ಹರಡಲಿದೆ ಎಂದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ, ಜಿಲ್ಲೆಯ ಪೋಲಿಸ್ ಇಲಾಖೆಯ ಮೇಲೆ ಗೌರವ ಇದೆ,ನಿಮ್ಮಲ್ಲಿ ಸಾಮರ್ಥ್ಯ ಇದೆ,ಸರಕಾರ ಸೌಲಭ್ಯ ಒದಗಿಸಿದೆ. ನಮ್ಮ ಬೇಡಿಕೆ ಇರುವಂತದ್ದು, ದಿಗಂತ್ ಎಂಬ ಯುವಕನನ್ನು ಪತ್ತೆ ಹಚ್ಚಿಕೊಡಿ, ಹಿಂದೂ ಸಂಘಟನೆಯವರು ಪ್ರತಿಬಾರಿ ರಸ್ತೆಗೆ ಇಳಿದು ಪ್ರತಿಭಟನೆ ಮಾಡುವ ಹಿಂದೂ ಸಮಾಜವನ್ನು ಕೆಣಕುವ ಕೆಲಸ ಮಾಡಬೇಡಿ. ಒಮ್ಮೆ ಹಿಂದೂ ಸಂಘಟನೆ ರಸ್ತೆಗಳಿದರೆ ಮುಂದೆ ಆಗಬಹುದಾದ ನಷ್ಟಕ್ಕೂ ನೀವು ಕಾರಣರಾಗುತ್ತೀರಿ. ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪ ಮಾಡುವ ಬಗ್ಗೆ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಪ್ರಸಾದ್ ಕುಮಾರ್ ರೈ, ರವೀಂದ್ರ ಕಂಬಳಿ, ಭರತ್ ಕುಮ್ಡೆಲು,ಉಮೇಶ್ ಶೆಟ್ಟಿ ಬರ್ಕೆ, ತಾರಾನಾಥ ಕೊಟ್ಟಾರಿ, ಫಾರೂಕ್ ಪರಂಗಿಪೇಟೆ, ರಮ್ಲಾನ್,ನಂದನ್ ಮಲ್ಯ, ಮನೋಜ್ ಆಚಾ̧ರ್ಯ, ರವೀಂದ್ರ ರೈ ಮತ್ತಿತರರು ಭಾಗಿಯಾಗಿದ್ದರು.ಹಿಂದೂ ಸಂಘಟನೆಗಳು ಇಂದು ಬಂದ್‌ಗೆ ಕರೆ ನೀಡಿದ್ದರ ಹಿನ್ನಲೆಯಲ್ಲಿ  ಫರಂಗಿ ಪೇಟೆಯ ಎಲ್ಲಾ ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ಬಂದ್ಆಚರಿಸಲಾಯಿತು.

ತನಿಖೆ ತೀವ್ರ- ಎಸ್ಪಿ ಭರವಸೆ
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತೀಶ್ ಎನ್ ಅವರು, ದಿಗಂತ್‌ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ, ಇಲಾಖೆ ತನಿಖೆಯನ್ನು ತೀವ್ರಗೊಳಿಸಿದೆ ಎಂದರು. ಈ ಪ್ರಕರಣ ಪ್ರತಿಭಟನೆ ಮಾಡುವ ಹಂತದವರೆಗೆ ಬರಬಾರದಿತ್ತು, ಆದರೆ ಕ್ಲಿಷ್ಟಕರವಾದ ಪ್ರಕರಣಗಳು ಸ್ವಲ್ಪ ಸಮಯ ಬೇಕಾಗುತ್ತದೆ. ಈ ಪ್ರಕರಣಕ್ಕೆ ಸಂಭಂಧಿಸಿ ಜಿಲ್ಲೆಯ ವಿವಿಧ ಠಾಣೆಯ ನುರಿತ ಪೋಲೀಸರನ್ನು ಕರೆಸಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇವೆ, ದಿಗಂತ್ ಪತ್ತೆಯಾಗುವವರೆಗೆ ನಾವು ಸುಮ್ಮನೆ ಕೂರುವುದಿಲ್ಲ ಎಂದರು. ಘಟನೆ ಬಗ್ಗೆ ನಿಮ್ಮಲ್ಲಿ ‌ಮಾಹಿತಿ ಇದ್ದರೆ ನಮ್ಮ ಜೊತೆ ಹಂಚಿಕೊಳ್ಳಿ,  ನಮ್ಮ ಮೇಲೆ  ಭರವಸೆ ಇರಲಿ. ತನಿಖೆ ಮುಂದುವರಿಸಲು ನಿಮ್ಮ ಸಹಕಾರ ಇರಲಿ ಎಂದವರು ಈ ಸಂದರ್ಭ ಮನವಿ ಮಾಡಿದರು.

ಅಪರಿಚಿತ ಕಾರಿನ ಬಗ್ಗೆ ಅನುಮಾನ..!

ಫರಂಗಿಪೇಟೆಯ ಪಿಯು ವಿದ್ಯಾರ್ಥಿ ದಿಗಂತ್ ಫೆಬ್ರವರಿ 25ರಂದು ಸಂಜೆ 7 ಗಂಟೆಗೆ ನಾಪತ್ತೆ ಆಗಿದ್ದಾನೆ. ದಿಗಂತ್ ನಾಪತ್ತೆಯಾಗಿ 5 ದಿನವಾದರೂ ಪತ್ತೆಯಾಗಿಲ್ಲ. ದಿಗಂತ್ ಕಾಣೆಯಾಗಿರುವುದರ ಹಿಂದೆ ಗಾಂಜಾ ಗ್ಯಾಂಗ್ ಕೈವಾಡವಿದೆ ಎಂದು ಸಂಘಟನೆಗಳು ಆರೋಪಿಸಿವೆ. ಅಷ್ಟೇ ಅಲ್ಲದೆ ಇದೀಗ ದೇವಸ್ಥಾನದ ಬಳಿ ಅಪರಿಚಿತ ಕ್ವಾಲಿಸ್ ಕಾರೊಂದು ಓಡಾಡಿದ ದೃಶ್ಯ ಆಂಜನೇಯ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೀಗಾಗಿ ದಿಗಂತ್ ನಾಪತ್ತೆ ಹಿಂದೆ ಗಾಂಜಾ ವ್ಯಸನಿಗಳ ಕೈವಾಡವಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.