ದಕ್ಷಿಣ ಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದ್ದು, ಇದೀಗ ಅನಾಮಿಕ ದೂರುದಾರ ಈಗಾಗಲೇ ಗುರುತಿಸಿರುವ 13 ಪಾಯಿಂಟ್ ಗಳಲ್ಲದೆ ಮತ್ತೆ ಹೊಸ ಜಾಗಗಳನ್ನು ತೋರಿಸಿದ್ದು, ಅಲ್ಲಿ ಶವಶೋಧ ಕಾರ್ಯ ನಡೆಸಲು ವಿಶೇಷ ತನಿಖಾದಳ ಮುಂದಾಗಿದೆ.
ಸಾಕ್ಷಿ ದೂರುದಾರ ಮೊದಲ ದಿನ ನೇತ್ರಾವತಿ ಸ್ನಾನ ಘಟ್ಟದ ಬಯಲಿನಲ್ಲಿ ತೋರಿಸಿದ್ದ 13ನೇ ಜಾಗದಲ್ಲಿ ಶೋಧ ಕಾರ್ಯ ಬಾಕಿ ಇದೆ. ಅಲ್ಲಿ ನೆಲ ಅಗೆಯುವ ಕಾರ್ಯ ಶುಕ್ರವಾರವೂ ನಡೆದಿಲ್ಲ. ಅದರ ನಡುವೆ ಇದೀಗ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಧರ್ಮಸ್ಥಳ ಗ್ರಾಮದ ಬೊಳಿಯಾರ್‌ನ ಕಾಡಿನೊಳಗೆ ಶೋಧಕಾರ್ಯಕ್ಕಾಗಿ ಶುಕ್ರವಾರ ತೆರಳಿದೆ.
ಸಾಕ್ಷಿ ದೂರುದಾರ ಎಸ್‌ಐಟಿ ಅಧಿಕಾರಿಗಳನ್ನು ಹೊಸ ಜಾಗ ತೋರಿಸಲು ಬೊಳಿಯಾರ್ ಬಳಿಯ ಕಾಡಿನ ಒಳಗೆ ಕರೆದೊಯ್ದಿದ್ದಾನೆ. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಎಸ್‌ಐಟಿ ಎಸ್.ಪಿ. ಜಿತೇಂದ್ರ ಕುಮಾರ್ ದಯಾಮ ಮತ್ತಿತರ ಅಧಿಕಾರಿಗಳು ಜೊತೆಯಲ್ಲಿದ್ದರು. ತಂಡದ ಜೊತೆ ಐದಾರು ಕಾರ್ಮಿಕರು ಮಾತ್ರ ಕಾಡಿನೊಳಗೆ ತೆರಳಿದ್ದಾರೆ. ಸದ್ಯ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲ ಘಟ್ಟದತ್ತ ಸಾಗುತ್ತಿದೆ.

