ಮಂಗಳೂರು : ಬೆಂಗಳೂರು ಮಂಗಳೂರು ವಂದೇ ಭಾರತ್ ರೈಲು ಸಂಚಾರ ಹೆಚ್ಚು ಜನೋಪಯೋಗಿ ಆಗಲು, ಸಂಜೆಯ ಬದಲು, ಮುಂಜಾನೆಯೇ ಮಂಗಳೂರು ಸೆಂಟ್ರಲ್ನಿಂದ ಪ್ರಯಾಣ ಆರಂಭಿಸಬೇಕು ಎಂದು ಕರಾವಳಿಯ ಅಭಿವೃದ್ಧಿ ಸಮಿತಿಯು ಸಚಿವ ವಿ ಸೋಮಣ್ಣ ಅವರಿಗೆ ಮನವಿ ಮಾಡಿದೆ.
ಪ್ರಸ್ತುತ ಪ್ರಸ್ತಾಪಿಸಲಾಗಿರುವ ವೇಳಾಪಟ್ಟಿ ಪ್ರಕಾರ, ವಂದೇಭಾರತ್ ರೈಲು ಯಶವಂತಪುರದಿಂದ ಬೆಳಗ್ಗೆ 7 ಗಂಟೆಗೆ ಹೊರಟು ಮಧ್ಯಾಹ್ನ 2.30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದ್ದು, ಮರು ಪ್ರಯಾಣದಲ್ಲಿ ಮಂಗಳೂರಿನಿಂದ ಮಧ್ಯಾಹ್ನ 3 ಗಂಟೆಗೆ ಹೊರಟು ರಾತ್ರಿ 10.30ಕ್ಕೆ ಯಶವಂತಪುರ ತಲುಪುವ ನಿರೀಕ್ಷೆಯಿದೆ.
ಆದರೆ, ಈ ವೇಳಾಪಟ್ಟಿಯಿಂದಾಗಿ ಕಚೇರಿ, ವಾಣಿಜ್ಯ ಹಾಗೂ ಇತರೆ ತುರ್ತು ಕೆಲಸಗಳಿಗಾಗಿ ಮಂಗಳೂರು ಮತ್ತು ಕರಾವಳಿ ಕರ್ನಾಟಕದಿಂದ ಬೆಂಗಳೂರಿಗೆ ಹಗಲಿನ ವೇಳೆ ಪ್ರಯಾಣಿಸುವ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುವುದಿಲ್ಲ. ಆದ್ದರಿಂದ, ವಂದೇ ಭಾರತ್ ರೈಲು ಸೇವೆಯನ್ನು ಮಂಗಳೂರು ಸೆಂಟ್ರಲ್ನಿಂದ ಬೆಳಗ್ಗೆ ಸುಮಾರು 5.45ಕ್ಕೆ ಆರಂಭಿಸಿ ಮಧ್ಯಾಹ್ನ ಸುಮಾರು 1 ಗಂಟೆಗೆ ಯಶವಂತಪುರ ತಲುಪುವಂತೆ ರೂಪಿಸಬೇಕು. ಮರುಪ್ರಯಾಣದಲ್ಲಿ ಯಶವಂತಪುರದಿಂದ ಸಂಜೆ ಸುಮಾರು 4 ಗಂಟೆಗೆ ಹೊರಟು ರಾತ್ರಿ 11ರ ಸುಮಾರಿಗೆ ಮಂಗಳೂರು ಸೆಂಟ್ರಲ್ ತಲುಪುವಂತೆ ವೇಳಾಪಟ್ಟಿ ನಿಗದಿಪಡಿಸಬೇಕು ಎಂದು ಸಮಿತಿ ವಿನಂತಿಸಿದೆ.
ಮಂಗಳೂರಿನಿಂದ ಮುಂಜಾನೆ ರೈಲು ಸಂಚರಿಸಿದರೆ ಪ್ರಯಾಣಿಕರು ಮಧ್ಯಾಹ್ನದ ವೇಳೆಗೆ ಬೆಂಗಳೂರು ತಲುಪಿ, ತಮ್ಮ ಕಚೇರಿ ಹಾಗೂ ವಾಣಿಜ್ಯ ಕೆಲಸ ಮುಗಿಸಿಕೊಂಡು ಅದೇ ದಿನ ರಾತ್ರಿ ರೈಲುಗಳಲ್ಲಿ ಮಂಗಳೂರಿಗೆ ಹಿಂತಿರುಗಲು ಸಾಧ್ಯವಾಗುತ್ತದೆ. ಇದರಿಂದ ಬೆಂಗಳೂರಿಗೆ ಹಗಲಿನ ಸಂಪರ್ಕ ಬಯಸುವ ಪ್ರಯಾಣಿಕರಿಗೆ ಈ ರೈಲು ಹೆಚ್ಚು ಉಪಯುಕ್ತವಾಗಲಿದೆ ಎಂದು ವೇದಿಕೆ ಅಭಿಪ್ರಾಯಪಟ್ಟಿದೆ.
ಪ್ರಸ್ತುತ ಕಾರ್ಯಾಚರಣೆ ನಡೆಸುತ್ತಿರುವ ತಿರುವನಂತಪುರಂ ಮಂಗಳೂರು ಸೆಂಟ್ರಲ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮಂಗಳೂರಿನಿಂದ ಮುಂಜಾನೆ ಹೊರಟು, ರಾತ್ರಿ ಮರಳಿ ಆಗಮಿಸುತ್ತಿದ್ದು, ಯಶಸ್ವಿಯಾಗಿ ಸೇವೆ ನೀಡುತ್ತಿದೆ. ಈ ಭಾಗದ ಜನರ ಪ್ರಯಾಣದ ಅಗತ್ಯತೆಗಳನ್ನು ಪೂರೈಸಲು ಮಂಗಳೂರು- ಬೆಂಗಳೂರು ವಂದೇ ಭಾರತ್ ರೈಲಿಗೂ ಇದೇ ಮಾದರಿಯ ಕಾರ್ಯಾಚರಣೆ ಜಾರಿಗೊಳಿಸಬೇಕು ಎಂದು ಸಮಿತಿ ಗಮನ ಸೆಳೆದಿದೆ.
ಮಂಗಳೂರು ರೈಲ್ವೆ ಜಾಲವು ಅಕ್ಟೋಬರ್ 1 ರಿಂದ ನೈರುತ್ಯ ರೈಲ್ವೆ ವ್ಯಾಪ್ತಿಗೆ ಒಳಪಡಲಿದೆ. ತದನಂತರ ಈ ರೈಲಿನ ಸಂಪೂರ್ಣ ಕಾರ್ಯಾಚರಣೆ ಮತ್ತು ನಿರ್ವಹಣೆ ಒಂದೇ ರೈಲ್ವೆ ವಲಯದ ಅಡಿಯಲ್ಲಿ ಬರಲಿದೆ. ಆದುದರಿಂದ ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಅದನ್ನು ಪರಿಹರಿಸಿ ಮಂಗಳೂರು ಸೆಂಟ್ರಲ್ ಬೆಳಗ್ಗೆ ಆರಂಭಿಸುವಂತೆ ಆಗ್ರಹಿಸಲಾಗಿದೆ.

