ತೊಕ್ಕೊಟ್ಟು: ದಕ್ಷಿಣ ಕನ್ನಡ ಜಿಲ್ಲಾ ತಮಿಳು ಮರುತ್ತುವರ್ ಸಮಾಜದ ದಶಮಾನೋತ್ಸವ ಸಮಾರಂಭವು ತೊಕ್ಕೊಟ್ಟು ಒಳಪೇಟೆಯ ಕ್ಲಿಕ್ ಹಾಲ್ನಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವನ್ನು ಸನ್ಮಾನ್ಯ ಸಚಿವರಾದ ಶ್ರೀ ಯು.ಟಿ . ಖಾದರ್ ಪರೀದ್ ಅವರು ಉದ್ಘಾಟಿಸಬೇಕಿತ್ತು. ಅವರ ಅನುಪಸ್ಥಿತಿಯಲ್ಲಿ ಗೌರವ ಅತಿಥಿಗಳಾದ ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರಾದ ಶ್ರೀ ಕೆ.ಟಿ . ಸುವರ್ಣ ಮತ್ತು ಲೆಕ್ಸ್ ಜೂರಿಸ್ ಲಾ ಚೇಂಬರ್, ಮಂಗಳೂರು ಇದರ ವಕೀಲರಾದ ಶ್ರೀ ಮಹಮ್ಮದ್ ಅಸ್ಗರ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಸಭೆಯ ಗೌರವಾಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕೇರಳ ರಾಜ್ಯ ಮರುತ್ತುವರ್ ಸಮಾಜದ ಅಧ್ಯಕ್ಷರಾದ ಶ್ರೀ ಪಿ. ಸೆಲ್ವರಾಜ್, ತಮಿಳುನಾಡು ಮರುತ್ತುವರ್ ಸಮಾಜದ ಅಧ್ಯಕ್ಷರಾದ ಶ್ರೀ ಕೆ.ಟಿ. ರಘುಪತಿ, ಪಾಂಡಿಚೇರಿ ಮರುತ್ತುವರ್ ಸಮಾಜದ ಅಧ್ಯಕ್ಷರಾದ ಶ್ರೀ ಎಲ್. ರಾಜಾ, ಕರ್ನಾಟಕ ರಾಜ್ಯ ಮರುತ್ತುವರ್ ಸಮಾಜದ ಅಧ್ಯಕ್ಷರಾದ ಶ್ರೀ ಪಿ. ಕುಮಾರ್ ಸಾಲತ್ತೂರು, ಜಿಲ್ಲಾಧ್ಯಕ್ಷರಾದ ಶ್ರೀ ಎಸ್. ರವಿ ಬೆಳ್ತಂಗಡಿ ಉಪಸ್ಥಿತರಿದ್ದರು.
ಜಾತಿ ಪ್ರಮಾಣ ಪತ್ರಕ್ಕೆ ಸ್ಪಷ್ಟ ಆದೇಶಕ್ಕೆ ಆಗ್ರಹ:
ಪ್ರಧಾನ ಕಾರ್ಯದರ್ಶಿ ಶ್ರೀ ಎ. ಶಶಿಕುಮಾರ್ ಮರುತ್ತುವರ್ ಅವರು ಮಾತನಾಡಿ, “ನಮ್ಮ ಸಮಾಜವು ಕಳೆದ 70 ವರ್ಷಗಳಿಂದ ಕರ್ನಾಟಕದ ನಾನಾ ಭಾಗಗಳಲ್ಲಿ ಕ್ಷೌರಿಕ ವೃತ್ತಿ ಸೇರಿದಂತೆ ಇತರ ಕಸುಬುಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದೆ. ನಮ್ಮ ಮಕ್ಕಳಿಗೆ ಮತ್ತು ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣಪತ್ರ ಸಿಗದೆ ತೀವ್ರ ತೊಂದರೆಯಾಗುತ್ತಿದೆ. ಈ ಕುರಿತು 2021ರಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ನಮ್ಮ ಮನವಿಯನ್ನು ಪರಿಶೀಲಿಸಿದ ಹಿಂದುಳಿದ ವರ್ಗಗಳ ಆಯೋಗವು ನಮ್ಮ ಜಾತಿಯನ್ನು ಪ್ರವರ್ಗ 2ಎ ಗೆ ಸೇರಿಸಬೇಕೆಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಅದರ ಫಲವಾಗಿ 2025-26ರ ಜಾತಿ ಗಣತಿಯಲ್ಲಿ ಕ್ರಮ ಸಂಖ್ಯೆ A-950 ರಲ್ಲಿ ಮರುತ್ತುವರ್ ಸಮಾಜದ ಹೆಸರನ್ನು ಸರಕಾರ ಅಧಿಕೃತವಾಗಿ ಪ್ರಕಟಿಸಿದೆ. ಕೇವಲ ಪ್ರಕಟಣೆ ಸಾಲದು. ನಮ್ಮ ಪೂರ್ವಜರಿಂದಲೇ ನಮಗೆ ಮರುತ್ತುವರ್ ಎಂಬ ಜಾತಿ ಪ್ರಮಾಣಪತ್ರ ಅತ್ಯಗತ್ಯ. ನಮ್ಮ ನೋಂದಾಯಿತ ಸಂಘವು ‘ಇವರು ನಮ್ಮ ಸಮಾಜಕ್ಕೆ ಸೇರಿದವರು’ ಎಂದು ದೃಢೀಕರಣ ಪತ್ರ ನೀಡಿದರೆ, ಅದನ್ನು ಪರಿಗಣಿಸಿ ಗ್ರಾಮ ಆಡಳಿತಾಧಿಕಾರಿ(VA) ಮತ್ತು ತಹಶೀಲ್ದಾರ್ ಅವರು ಜಾತಿ ಪ್ರಮಾಣಪತ್ರ ನೀಡುವಂತೆ ಸರಕಾರ ಸ್ಪಷ್ಟ ಆದೇಶ ಹೊರಡಿಸಬೇಕು. ಜೊತೆಗೆ ಮರುತ್ತುವರ್ ಸಮಾಜವನ್ನು ಅಧಿಕೃತವಾಗಿ ಪ್ರವರ್ಗ 2ಎ ಪಟ್ಟಿಯಲ್ಲಿ ಸೇರಿಸಿ ಆದೇಶ ಹೊರಡಿಸಬೇಕು ಎಂದು ಸಚಿವರ ಮುಖಾಂತರ ಸರಕಾರವನ್ನು ಒತ್ತಾಯಿಸುತ್ತೇವೆ” ಎಂದು ಹೇಳಿದರು.
ಶ್ರೀ ಕೆ.ಟಿ. ಸುವರ್ಣ ಅವರು ಮಾತನಾಡಿ, “ಶ್ರೀ ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗದಲ್ಲಿ ಕರ್ನಾಟಕದಲ್ಲಿ ದಶಕಗಳಿಂದ ನೆಲೆಸಿರುವ ಅನೇಕ ಸಮಾಜಗಳ ಬೇಡಿಕೆಗೆ ನ್ಯಾಯ ಸಿಕ್ಕಿದೆ. ಮರುತ್ತುವರ್ ಸಮಾಜವನ್ನು ಪ್ರವರ್ಗ 2ಎ ಗೆ ಸೇರಿಸಲು ಶಿಫಾರಸು ಮಾಡಲಾಗಿದೆ. ಈಗಿನ ಸರ್ಕಾರ ಆದಷ್ಟು ಬೇಗ ಇದನ್ನು ಕಾರ್ಯರೂಪಕ್ಕೆ ತರಲಿದೆ. ಇದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ” ಎಂದರು.
ಶ್ರೀ ಮಹಮ್ಮದ್ ಅಸ್ಗರ್ ಅವರು ಮಾತನಾಡಿ, “ಮರುತ್ತುವರ್ ಸಮಾಜಕ್ಕೆ ಯಾವುದೇ ಕಾನೂನು ನೆರವು ಅಗತ್ಯವಿದ್ದರೂ ಸಂಕೋಚವಿಲ್ಲದೆ ಸಂಪರ್ಕಿಸಬಹುದು, ನಾನು ಸದಾ ಸಿದ್ಧನಿದ್ದೇನೆ” ಎಂದು ಭರವಸೆ ನೀಡಿದರು.
ಸಮಾರಂಭದಲ್ಲಿ ಕೇರಳ, ತಮಿಳುನಾಡು, ಪಾಂಡಿಚೇರಿಯ ಸಮಾಜ ಸೇವಕರನ್ನು, ಶೈಕ್ಷಣಿಕ, ಕ್ರೀಡಾ ಮತ್ತು ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ 60 ವರ್ಷ ಮೇಲ್ಪಟ್ಟ ಎಲ್ಲಾ ಕ್ಷೌರಿಕ ವೃತ್ತಿದಾರರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಪದಾಧಿಕಾರಿಗಳು, ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ನೂರಾರು ಸಮಾಜ ಬಾಂಧವರು ಭಾಗವಹಿಸಿದ್ದರು. ಸಮಾಜದ ಪರವಾಗಿ ಪ್ರಧಾನ ಕಾರ್ಯದರ್ಶಿಯವರಾದ ಎ ಶಶಿಕುಮಾರ್ ಮರುತ್ತುವರ್ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು ಮತ್ತು ಅಧ್ಯಕ್ಷರಾದ ಕುಮಾರ್ ಪಿ ಸಾಲತ್ತೂರು ಧನ್ಯವಾದ ಸಮರ್ಪಣೆ ಗೈದರು

