ದಕ್ಷಿಣ ಕನ್ನಡ : ಜಿಲ್ಲಾ ಸ್ಥಳೀಯಾಡಳಿತ ಕ್ಷೇತ್ರದ ವಿಧಾನ ಪರಿಷತ್ ಉಪಚುನಾವಣೆ ಮತದಾನ ಶಾಂತಿಯುತವಾಗಿ ಮುಗಿದಿದ್ದು, ಶೇ.97.91 ರಷ್ಟು ಮತದಾನವಾಗಿದೆ. ಜಿಲ್ಲೆಯ ನಗರ ಸ್ಥಳೀಯ ಆಡಳಿತ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತಿಯಲ್ಲಿ ಬೆಳಗಿನಿಂದಲೇ ಬಿರುಸಿನಿಂದ ಮತದಾನ ನಡೆಯಿತು. ಮತಗಟ್ಟೆಗಳಿಗೆ ತೆರಳಿ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿದರು. ಶಾಸಕರು ಸಂಸದರು ಹುರುಪಿನಿಂದ ಬೆಳಗ್ಗೆಯೇ ಮತದಾನ ಮಾಡಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿ ಸಂಸದರಾದ ಬಳಿಕ ತೆರವಾದ ದಕ್ಷಿಣ ಕನ್ನಡ ಜಿಲ್ಲಾ ಸ್ಥಳೀಯಾಡಳಿತ ಕ್ಷೇತ್ರದ ವಿಧಾನ ಪರಿಷತ್ ಉಪಚುನಾವಣೆಗೆ ಉಡುಪಿ ಜಿಲ್ಲೆಯಲ್ಲೂ ಇಂದು ಮತದಾನ ನಡೆಯಿತು. ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯಿತಿಯಲ್ಲಿ ಮತದಾನ ಮಾಡಿದರು. ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ ಪಾಲ್ ಸುವರ್ಣ ಉಡುಪಿ ನಗರಸಭೆಯಲ್ಲಿ ಮತದಾನ ಮಾಡಿದರು. ಬಿಜೆಪಿಯ 20 ನಗರಸಭಾ ಸದಸ್ಯರೊಂದಿಗೆ ಆಗಮಿಸಿ, ಓಟಿಂಗ್ ಮಾಡಿದರು.

ಮಾಜಿ ಸಚಿವ ವಿ ಸುನಿಲ್ ಕುಮಾರ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಮಾಡಿದರು. ಉಳಿದಂತೆ ಜಿಲ್ಲೆಯ ಎಲ್ಲಾ ಸ್ಥಳೀಯ ಆಡಳಿತ ಪ್ರತಿನಿಧಿಗಳು ಆಯಾ ಪಂಚಾಯ್ತಿಗಳಲ್ಲಿ ಮತದಾನ ಮಾಡಿದರು. ಉಡುಪಿ ಜಿಲ್ಲೆಯಲ್ಲಿ ಒಟ್ಟು158 ಮತಗಟ್ಟೆಗಳಿದ್ದು, 2480 ಸ್ಥಳೀಯ ಆಡಳಿತ ಪ್ರತಿನಿಧಿಗಳು ಮತ ಚಲಾಯಿಸಿದರು.
ಜಿಲ್ಲಾಧಿಕಾರಿ ಡಾ .ವಿದ್ಯಾ ಕುಮಾರಿ ಆಯ್ದ ಮತಗಟ್ಟೆ ಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಆಗುತ್ತಿದೆ. ಕಸ್ತೂರಿ ರಂಗನ್ ವರದಿ ಜಾರಿ ಚರ್ಚೆ ಇರುವ ಕಾರಣ ಬೈಂದೂರು ಕುಂದಾಪುರ ಭಾಗದಲ್ಲಿ ಮತದಾನಕ್ಕೆ ಜನಪ್ರತಿನಿಧಿಗಳು ವಿರೋಧಿಸಿದ್ದು, ಮನವೊಲಿಕೆ ಮಾಡಿ ಹಲವರನ್ನು ಮತದಾನ ಮಾಡಲಾಯಿತು ಎಂದರು.
ಮತದಾನದ ಬಳಿಕ ಮಾತನಾಡಿದ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಅತ್ಯಧಿಕ ಮತಗಳಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಪ್ರಸ್ತುತ ವ್ಯವಸ್ಥೆಯಲ್ಲಿ ಚುನಾವಣೆಗಳು ಜಾತಿಯ ಆಧಾರದಲ್ಲಿ ನಡೆಯುತ್ತಿದ್ದರೆ, ಈ ಕ್ಷೇತ್ರದಲ್ಲಿ ಅತ್ಯಂತ ಸಣ್ಣ ಸಮುದಾಯದ, ಪಕ್ಷದ ಕಾರ್ಯಕರ್ತನಿಗೆ ಅವಕಾಶ ನೀಡುವ ಮೂಲಕ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸುವ ಕೆಲಸವಾಗಿದೆ ಎಂದರು.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಇಂದು ಮತದಾನ ನಡೆದಿದ್ದು ಅಕ್ಟೋಬರ್ 24ರಂದು ಮಂಗಳೂರಿನಲ್ಲಿ ಮತ ಎಣಿಕೆ ನಡೆಯಲಿದೆ. ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆದ ಕಾರಣ ಯಾವುದೇ ಗೊಂದಲಗಳು ಇರಲಿಲ್ಲ. ಕಾರ್ಕಳ ಹೆಬ್ರಿ ಭಾಗದಲ್ಲಿ ಮಳೆಯಾದ ಕಾರಣ ಕೊಂಚ ನಿಧಾನಗತಿಯಲ್ಲಿ ಮತದಾನವಾಗಿದೆ.

