ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕನೋರ್ವನ ಮೇಲೆ ಸತತ 7 ತಿಂಗಳುಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಬಂಧಿತ ಆರೋಪಿಗಳನ್ನು ಜವಾದ್, ಶಾಹಿದ್ ಮತ್ತು ರಿಯಾಝ್ ಅಲಿಯಾಸ್ ಅಬ್ದುಲ್ ಗಫೂರ್ ಎಂದು ಗುರುತಿಸಲಾಗಿದೆ. ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾದ ಸಂತ್ರಸ್ತ ಬಾಲಕನಿಗೆ 2026ರ ಫೆಬ್ರುವರಿ ತಿಂಗಳಿನಿಂದ ಆಗಸ್ಟ್ ತಿಂಗಳ ಅವಧಿಯಲ್ಲಿ ಆರೋಪಿಗಳಾದ ಜವಾದ್, ಶಾಹಿದ್, ರಿಯಾಝ್ ಅಲಿಯಾಸ್ ಅಬ್ದುಲ್ ಗಫೂರ್ ಹಾಗೂ ಇತರೆ ಮೂವರು ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಕುರಿತು ಸಂತ್ರಸ್ತ ಬಾಲಕನು ದಿನಾಂಕ 04-09-2026 ರಂದು ವಿಟ್ಲ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾನೆ.
ದೂರಿನ ಆಧಾರದ ಮೇಲೆ ವಿಟ್ಲ ಠಾಣೆಯಲ್ಲಿ ಪ್ರತ್ಯೇಕವಾಗಿ ಅ.ಕ್ರ: 185/2026, 186/2026, 187/2026, 188/2026, 189/2026 ಹಾಗೂ 190/2026 ರಂತೆ ಪೋಕ್ಸೋ (POCSO) ಕಾಯ್ದೆ 2012ರ ಕಲಂ 4(2), 5(m), 6 ಮತ್ತು 8ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಯಿತು.
ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ವಿಟ್ಲ ಪೊಲೀಸರು, ಆರೋಪಿಗಳ ಪೈಕಿ ಜವಾದ್, ಶಾಹಿದ್ ಹಾಗೂ ರಿಯಾಝ್ ಅವರನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇತರೆ ಆರೋಪಿಗಳ ಪತ್ತೆಗೂ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

