ಮಂಗಳೂರು: ಕರಾವಳಿ ಪ್ರದೇಶದಲ್ಲಿ ಮಾನ್ಯ ಕರ್ನಾಟಕ ಹೈಕೋರ್ಟ್ನ ಸಕ್ಯೂರ್ಟ್ ಪೀಠ ಸ್ಥಾಪನೆಗೆ ಬಹುಕಾಲದಿಂದ ಬೇಡಿಕೆ ಇದೆ. ಇತ್ತೀಚಿಗೆ, ಶಾಶ್ವತ ಹೈಕೊರ್ಟ್ ಪೀಠ ಹೋರಾಟ ಸಮಿತಿ ರಚಿಸಲಾಗಿ ಶ್ರೀ ಐವನ್ ಡಿಸೋಜ, ವಿಧಾನಪರಿಷತ್ ಸದಸ್ಯರ ಸಂಚಾಲಕತ್ವದಲ್ಲಿ ಹಲವು ಸಭೆಗಳು ನಡೆದಿದ್ದು, ವಿವಿಧ ಸಂಘಸಂಸ್ಥೆಗಳ, ಮುಖ್ಯಸ್ಥರನ್ನು ಹಾಗೂ ಸಮಾಜದ ವಿವಿಧ ವರ್ಗದ ಜನರ ಸಂಪರ್ಕ ಸಭೆಗಳನ್ನು ನಡೆಸಿ, ಹೈಕೋರ್ಟ್ ಶಾಶ್ವತ ಪೀಠ ಸ್ಥಾಪನೆಗಾಗಿ ವಿವಿಧ ಪ್ರಾಧಿಕಾರಗಳಿಗೆ ಮನವಿಗಳನ್ನು ಸಲ್ಲಿಸಲಾಗಿತ್ತು.

ಇತ್ತೀಚೆಗೆ ಕರ್ನಾಟಕದ ಮುಖ್ಯಮಂತ್ರಿ ಮಾನ್ಯ ಸಿದ್ಧರಾಮಯ್ಯ ಅವರು ದಕ್ಷಿಣ ಭಾರತದಲ್ಲಿ ಸುಪ್ರೀಂ ಕೋರ್ಟ್ ಪೀಠ ಸ್ಥಾಪನೆಗೆ ಕರೆ ನೀಡಿದ್ದು, ನ್ಯಾಯದ ವಿಕೇಂದ್ರೀಕರಣದ ಮೂಲಕ ಸಮಯೊಚಿತ ನ್ಯಾಯ ಒದಗಿಸಲು ಇದು ಅಗತ್ಯವೆಂದು ಪ್ರತಿಪಾದಿಸಿದ್ದಾರೆ. ಏಪ್ರಿಲ್ 18ರ ಶನಿವಾರ ನಡೆದ 22ನೇ ದ್ವೈವಾರ್ಷಿಕ ರಾಜ್ಯ ಮಟ್ಟದ ನ್ಯಾಯಾಂಗ ಅಧಿಕಾರಿಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ನ್ಯಾಯಕ್ಕೆ ಸುಲಭ ಪ್ರವೇಶವನ್ನು ಸುಧಾರಿಸಲು ತುರ್ತು ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ ಹಾಗೂ ಪ್ರಕರಣಗಳ ಹೆಚ್ಚುತ್ತಿರುವ ಬಾಕಿ ಸಮಸ್ಯೆ ಸಮಯೋಚಿತ ನ್ಯಾಯ ವಿತರಣೆಗೆ ಗಂಭೀರ ಅಡ್ಡಿಯಾಗಿದೆ ಎಂದು ತಿಳಿಸಿದ್ದಾರೆ. ಅವರ ಈ ಹೇಳಿಕೆ ನ್ಯಾಯಾಂಗ ಸುಧಾರಣೆ ಮತ್ತು ನ್ಯಾಯಪ್ರಾಪ್ತಿಗೆ ಸಂಬಂಧಿಸಿದ ಚರ್ಚೆಗಳಿಗೆ ಹೊಸ ಚೈತನ್ಯ ನೀಡಿದೆ.

ಮುಖ್ಯಮಂತ್ರಿಯವರ ಈ ಹೇಳಿಕೆಯಿಂದ ಪ್ರೇರಿತರಾಗಿ, ಕರಾವಳಿ ಕರ್ನಾಟಕ ಹೈಕೋರ್ಟ್ ಸಕ್ಯೂರ್ಟ್ ಪೀಠ ಚಳುವಳಿ ವತಿಯಿಂದ, ಹೋರಾಟ ಸಮಿತಿಯ ಪಿಆರ್‌ಒ ಹಾಗೂ ಜಿಲ್ಲಾ ಪ್ರಧಾನ ಸರ್ಕಾರಿ ವಕೀಲರಾದ ಶ್ರೀ ಎಂ.ಪಿ.ನೊರೊನ್ಹಾ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಹಾಗೂ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಅಧ್ಯಕ್ಷರು ಶ್ರೀ. ಎಚ್ ವಿ. ರಾಘವೇಂದ್ರ ರಾವ್ ಹಾಗೂ ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀ. ರಿಚರ್ಡ್ ಡಿಕೋಸ್ಟಾ ಎಂ ರವರು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಮೂರ್ತಿ ಹಾಗೂ ಪ್ರಸ್ತುತ ಆಂಧ್ರ ಪ್ರದೇಶದ ರಾಜ್ಯಪಾಲರಾದ ಶ್ರೀ ಅಬ್ದುಲ್ ನಜೀರ್ ಅವರನ್ನು ಭೇಟಿ ಮಾಡಿ ಮಾರ್ಗದರ್ಶನವನ್ನು ಕೋರಿದ್ದರು.

ಶ್ರೀ ಅಬ್ದುಲ್ ನಜೀರ್ ಅವರ ಹೈಕೋರ್ಟ್ ಶಾಶ್ವತ ಪೀಠ ಹಾಗೂ ಸಂಚಾರಿ ಪೀಠ ಸ್ಥಾಪನೆಗೆ ಅನುಸರಿಸಬೇಕಾದ ಮಾರ್ಗಸೂಚಿಗಳ ಕುರಿತು ಅಮೂಲ್ಯ ಸಲಹೆಗಳು ಹಾಗೂ ಮಾರ್ಗದರ್ಶನ ನೀಡಿದರು. ಜೊತೆಗೆ ಮಂಗಳೂರುನಲ್ಲಿ ಶಾಶ್ವತ ಪೀಠ ಹಾಗೂ ಸಂಚಾರಿ ಪೀಠ ಸ್ಥಾಪನೆಗೆ ತಮ್ಮ ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ನಂತರ ಸಮಿತಿ ಕರ್ನಾಟಕ ವಿಧಾನಸಭೆಯ ಮಾನ್ಯ ಸ್ಪೀಕರ್ ಶ್ರೀ ಯು.ಟಿ ಖಾದರ್ ಫರೀದ್ ಅವರನ್ನು ಭೇಟಿ ಮಾಡಿದ್ದು, ಅವರು ಕರ್ನಾಟಕದ ಮುಖ್ಯ ನ್ಯಾಯಮೂರ್ತಿಗೆ ಮಂಗಳೂರಿನಲ್ಲಿ ಶೀಘ್ರವಾಗಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಮನವಿ ಸಲ್ಲಿಸಿ, ಈ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ.

ಶ್ರೀ ಎಂ ಪಿ ನೊರೊನ್ಹಾ, ಎಚ್ ವಿ ರಾಘವೇಂದ್ರ ರಾವ್ ಹಾಗೂ ರಿಚರ್ಡ್ ಡಿಕೋಸ್ಟಾ ಎಂ ಅವರನ್ನು ಒಳಗೊಂಡ ನಿಯೋಗವು ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಮಾನ್ಯ ನ್ಯಾಯಮೂರ್ತಿ ವಿಭು ಭಖ್ರು ಅವರನ್ನು ಭೇಟಿ ಮಾಡಿ ಕರಾವಳಿ ಕರ್ನಾಟಕದಲ್ಲಿ ಶಾಶ್ವತ ಪೀಠ ಸ್ಥಾಪನೆ ಆಗುವ ತನಕ ಸಂಚಾರಿ ಪೀಠ ಕೂಡಲೇ ಸ್ಥಾಪಿಸಲು ಮನವಿ ಸಲ್ಲಿಸಿದರು. ಪ್ರಾರಂಭಿಕ ಹಂತದಲ್ಲಿ ಒಂದು ವಿಭಾಗೀಯ ಪೀಠ ಮತ್ತು ಎರಡು ಏಕಸದಸ್ಯ ಪೀಠಗಳನ್ನು ಒಳಗೊಂಡ ಸಂಚಾರಿ ಪೀಠ ಸ್ಥಾಪಿಸುವಂತೆ ಮನವಿ ಮಾಡಿದರು.

ಮುಖ್ಯ ನ್ಯಾಯಾಮೂರ್ತಿಗಳು ವಿಷಯವನ್ನು ವಿವರವಾಗಿ ಚರ್ಚಿಸಿ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹಾಗೂ ಅಗತ್ಯವಿದ್ದಲ್ಲಿ ಸ್ವತಃ ಭೇಟಿ ನೀಡಿ ಲಭ್ಯವಿರುವ ಮೂಲಸೌಕರ್ಯ ಮತ್ತು ಹೆಚ್ಚುವರಿ ಅಗತ್ಯಗಳ ಕುರಿತು ವರದಿ ಪಡೆಯುವುದಾಗಿ ಭರವಸೆ ನೀಡಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳು, ಈ ಬಗ್ಗೆ ಒಂದು ಸಮಿತಿಯನ್ನು ರಚಿಸಿ, ಸಮಿತಿಯೊಂದಿಗೆ ಚರ್ಚಿಸಿ ಸ್ವತಃ ಅಥವಾ ಆಡಳಿತಾತ್ಮಕ ನ್ಯಾಯಮೂರ್ತಿಗಳನ್ನು ಕಳುಹಿಸಿ ವರದಿ ತರಿಸುವುದಾಗಿ ತಿಳಿಸಿದರು.

ಹೊರಾಟ ಸಮಿತಿಯ ನಿಯೋಗ ಸದಸ್ಯರು ತದನಂತರ ಜಿಲ್ಲೆಯ ಆಡಳಿತಾತ್ಮಕ ನ್ಯಾಯಧೀಶರಾದ ಶ್ರೀ ಎಚ್. ಟಿ. ನರೇಂದ್ರ ಪ್ರಸಾದ್‌ರನ್ನು ಭೇಟಿ ಮಾಡಿದರು. ನ್ಯಾಯಧೀಶರು ಸಮಿತಿಯವರಿಗೆ ಸಕರಾತ್ಮಕವಾಗಿ ಸ್ಪಂದಿಸಿ, ಹೈಕೋರ್ಟ್ ಪೀಠ ಸ್ಥಾಪನೆಗೆ ಪೂರ್ಣ ಬೆಂಬಲವನ್ನು ಸೂಚಿಸಿದರು.

ನಂತರ ಸಮಿತಿಯ ಸದಸ್ಯರು, ಗೌರವಾನ್ವಿತ ನ್ಯಾಯಧೀಶರಾದ ಶ್ರೀ ರಾಜೇಶ್ ರೈ ಕಲ್ಲಂಗಣ ಅವರನ್ನು ಭೇಟಿ ಮಾಡಿದರು. ಸದ್ರಿಯವರು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು, ಮಂಗಳೂರಿನಲ್ಲಿ ಹೈಕೋರ್ಟ್ ಪೀಠಸ್ಥಾಪನೆಗೆ ಸಂಪೂರ್ಣ ಸಹಕಾರದ ಆಶ್ವಾಸನೆ ನೀಡಿದರು. ಹೈಕೋರ್ಟ್ ವಕೀಲರಾದ ಶ್ರೀ ಅಜೆಯ್ ಮೆಲ್ರಿಕ್ ನೊರೊನ್ಹಾ ಜೊತೆಗಿದ್ದರು. ಈ ಕ್ರಮವನ್ನು ವಕೀಲರ ವಲಯ, ವಿವಿಧ ಸಂಘಟನೆಗಳು ಹಾಗೂ ಕರಾವಳಿ ಪ್ರದೇಶದ ಸಾರ್ವಜನಿಕರು ಸ್ವಾಗತಿಸಿದೆ.