ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲಿನ ರೀತಿಯಲ್ಲಿ ಶಾಂತಿಯನ್ನು ಕಾಪಾಡುವ ದೃಷ್ಟಿಯಿಂದ, ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಸಮಿತಿಯನ್ನು ರಚಿಸಲಾಗುವುದೆಂದು ವಿಧಾನ ಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಮಿತಿಯಲ್ಲಿ ಸೈಯದ್ ನಾಸೀರ್ ಹುಸೇನ್, ರೋಜಿಜಾನ್, ಎನ್ ಎ ಹ್ಯಾರಿಸ್, ಜಯಪ್ರಕಾಶ್ ಹೆಗ್ಡೆ, ಕಿಮ್ಮಣ್ಣಿ ರತ್ನಾಕರ್ ಮತ್ತು ನಾನು ಈ ಸಮಿತಿಯ ಸದಸ್ಯನಾಗಿರುತ್ತೇನೆ. ಈ ಸಮಿತಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವ ರೀತಿಯ ಪರಿಸ್ಥಿತಿ ಇದೆ ಎಂಬುದಾಗಿ ಸ್ಥೂಲವಾಗಿ ಗಮನಿಸುವುದು. ಶಾಂತಿ ಸಾಮರಸ್ಯ, ಆರ್ಥಿಕ ಅಭಿವೃದ್ಧಿ, ಸಮಾಜಿಕ ದೃಷ್ಟಿಕೋನದಿಂದ ಮುಂದಿನ ದಿನಗಳಲ್ಲಿ ಈ ಸಮಿತಿಯು ಕಾರ್ಯಾಚರಣೆ ನಡೆಸಲಿದೆ.

ಬಿಜೆಪಿ ಆಡಳಿತಕ್ಕೆ ಅಭಿವೃದ್ದಿ ಮಂತ್ರವನ್ನು ಜಪಿಸಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಅರಿತು ದ್ವೇಷ ಭಾಷಣವನ್ನು ಮಾಡ್ತಾರೆ. ಆ ಮೂಲಕ ವಿಷ ಬೀಜವನ್ನು ಬಿತ್ತು ಅಧಿಕಾರಕ್ಕೆ ಏರುವ ಪ್ರಯತ್ನ ಮಾಡ್ತಾರೆ. ಇದು ಈ ಭಾಗದ ಅಭಿವೃದ್ಧಿಗೆ ತೊಡಕಾಗಿ ಪರಿಣಮಿಸಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರೀತಿ ಸೌಹಾರ್ದತೆ ಅಗತ್ಯ ಹಾಗಾದ್ರೆ ಮಾತ್ರ ಅಭಿವೃದ್ದಿ ಸಾಧ್ಯ. ಕೆಲವೇ ಕಡೆಗಳಲ್ಲಿ ಸ್ವಾಸ್ಥ್ಯ ಕೆಡಿಸುವ ಪ್ರಯತ್ನದಿಂದ ಇಂದು ಇಡೀ ಕರಾವಳಿಗೆ ಕೆಟ್ಟ ಹೆಸರು ಬರುತ್ತಿದೆ. ಯಾರು ಕೊಲೆ ಮಾಡಿದ್ದಾರೋ ಅವರಿಗಿಂತ ಯಾರು ಕೊಲೆ ಮಾಡಲು ಪ್ರೇರಣೆ ನೀಡಿದ್ದಾರೋ ಅವರಿಗೆ ಶಿಕ್ಷೆ ಕಠಿಣವಾಗಿ ಆಗಬೇಕು. ಪ್ರಚೋದನಕಾರಿ ಭಾಷಣ ಮಾಡುವವರಿಗೆ ಶಿಕ್ಷೆ ಆಗಬೇಕು ವಿನಾಃ ನಿರಪರಾಧಿಗಳಿಗೆ ಶಿಕ್ಷೆ ಆಗಬಾರದು.

ಸುದ್ದಿಗೋಷ್ಠಿಯಲ್ಲಿ ಕೃಷ್ಣ ಶೆಟ್ಟಿ, ಪದ್ಮರಾಜ್ ಪೂಜಾರಿ, ಪ್ರಕಾಶ್ ಸಾಲಿಯಾನ್, ಮಹಮದ್ ಅಲಿ, ವಿಶ್ವೇಶ್ವರ ಕುಮಾರ್ ದಾಸ್ ಮುಂತಾದವರು ಉಪಸ್ಥಿತರಿದ್ದರು.