ಮಂಗಳೂರು : ಗಣೇಶೋತ್ಸವ ಸಾಮರಸ್ಯದ ಪ್ರತೀಕ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಜನರನ್ನು ಒಗ್ಗೂಡಿಸಲು ಬಾಲಗಂಗಾಧ ಅನುಷ್ಠಾನಕ್ಕೆ ತಂದಿದ್ದ ಗಣೇಶೋತ್ಸವದಲ್ಲಿ ಎಲ್ಲ ಮತ ಬಾಂಧವರು ಭಾಗವಹಿಸುತ್ತಾರೆ.
ಗಣೇಶೋತ್ಸವ ಸಾಮರಸ್ಯದ ಪ್ರತೀಕ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಜನರನ್ನು ಒಗ್ಗೂಡಿಸಲು ಬಾಲಗಂಗಾಧರ ತಿಲಕರು ಅನುಷ್ಠಾನಕ್ಕೆ ತಂದಿದ್ದ ಗಣೇಶೋತ್ಸವದಲ್ಲಿ ಎಲ್ಲ ಮತ ಬಾಂಧವರು ಭಾಗವಹಿಸುತ್ತಾರೆ. ಮಂಗಳೂರಿನ ಆರೆಸ್ಸೆಸ್ ಕಾರ್ಯಾಲಯ ಸಂಘನಿಕೇತನದಲ್ಲಿ 78ನೇ ವರ್ಷದ ಗಣೇಶೋತ್ಸವ ನಡೆಯುತ್ತಿದ್ದು ಶನಿವಾರ ಕ್ರಿಶ್ಚಿಯನ್ ಪ್ರತಿನಿಧಿಗಳು ಪಾಲ್ಗೊಂಡು ಗಣೇಶನಿಗೆ ನಮಿಸಿ ಪ್ರಸಾದ ಸ್ವೀಕರಿಸಿದರು.
ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ನೇತೃತ್ವದಲ್ಲಿ ಕ್ರಿಶ್ಚಿಯನ್ ಪ್ರತಿನಿಧಿಗಳ ನಿಯೋಗ ಭೇಟಿ ನೀಡಿ ಹೂ, ಹಣ್ಣುಗಳನ್ನು ಸಮರ್ಪಿಸಿತು. ಗಣೇಶನ ಪ್ರಸಾದವನ್ನು ಸ್ವೀಕರಿಸಿ, ಆರೆಸ್ಸೆಸ್ ನೂತನ ಕಾರ್ಯಾಲಯಕ್ಕೆ ಭೇಟಿ ನೀಡಿ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ವೇದಿಕೆಯ ಸಂಚಾಲಕ ಫ್ರಾಂಕ್ಲಿನ್ ಮೊಂತೆರೋ, ಮತ- ಧರ್ಮದ ಆಚರಣೆ ಬೇರೆ ಇದ್ದರೂ ರಾಷ್ಟ್ರೀಯತೆಯಲ್ಲಿ ನಾವೆಲ್ಲ ಒಂದೇ ಎಂಬ ಸಂದೇಶ ರವಾನಿಸುವುದು ನಮ್ಮ ಉದ್ದೇಶ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಶಯ ಕೂಡ ರಾಷ್ಟ್ರೀಯ ಐಕ್ಯತೆ. ಹಾಗಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಭಕ್ತಿ, ಶ್ರದ್ಧೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯಿಂದ ಪ್ರತಿ ವರ್ಷ ಈ ಭೇಟಿ ಹಮ್ಮಿಕೊಳ್ಳುತ್ತಿದ್ದೇವೆ. ಈ ಬಾರಿಯೂ 18 ಮಂದಿ ಕ್ರಿಶ್ಚಿಯನ್ ಪ್ರತಿನಿಧಿಗಳು ಆಗಮಿಸಿ, ಗಣೇಶನ ಪ್ರಸಾದ ಸ್ವೀಕರಿಸಿದ್ದಾರೆ ಎಂದರು.
ಭರತನಾಟ್ಯದಲ್ಲಿ ಇತ್ತೀಚೆಗೆ ವಿಶ್ವ ದಾಖಲೆ ಮಾಡಿದ ರೆಮೊನಾ ಇವೆಟ್ ಪಿರೇರಾ ಅವರನ್ನು ಇದೇ ವೇಳೆ, ಗಣೇಶೋತ್ಸವ ಸಮಿತಿ ವತಿಯಿಂದ ಗೌರವಿಸಲಾಯಿತು. ಬಳಿಕ ಸಾಮರಸ್ಯದ ಸಂಕೇತವಾಗಿ ಜೊತೆಯಾಗಿ ಉಪಹಾರ ಸ್ವೀಕರಿಸಿದರು. ಕೇಶವ ಸ್ಮತಿ ಸಂವರ್ಧನಾ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್, ಪದಾಧಿಕಾರಿಗಳಾದ ಜಿ.ಸುರೇಶ್ ವಿ.ಕಾಮತ್, ಯೋಗೀಶ್ ಆಚಾರ್, ವಿನೋದ್ ಶೆಣೈ, ಅಭಿಷೇಕ್ ಭಂಡಾರಿ,
ಆರ್ಎಸ್ಎಸ್ ಪ್ರಮುಖರಾದ ಪಿ.ಎಸ್.ಪ್ರಕಾಶ್, ಸತೀಶ್ ರಾವ್, ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಡಾ.ಜೆಸ್ಸಿ ಮರಿಯಾ, ಡಾ.ಎಲ್ವಿಸ್ ರೋಡ್ರಿಗಸ್, ಡಾ.ತೆರೆಸಾ ಲಿಡಿಯಾ ಮೆಂಡೋನ್ಸಾ ಪ್ರೊ.ಸಂಧ್ಯಾ ಡಿಸೋಜ, ಲ್ಯಾನಿ ಮರೀಜಾ ಪಿಂಟೋ, ರೇಷ್ಮಾ ಡಿಸೋಜ, ಪ್ರವೀಣ್ ತಾವೊ, ಮ್ಯಾಕ್ಸಿಂ ಪಿರೇರಾ, ಅರುಣ್ರಾಜ್ ರೋಡ್ರಿಗಸ್, ವಿನೋದ್ ಪಿಂಟೋ, ನವೀನ್ ಫರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು.

