ಮಂಗಳೂರು: CFAL ಕ್ಯಾಂಪಸ್‌ನಲ್ಲಿ ನಡೆದ ಮೇಕರ್ಸ್ ಫೇಟ್ 2025 ಈ ವರ್ಷವೂ ಮಕ್ಕಳ ಉತ್ಸಾಹದಿಂದ ಕಂಗೊಳಿಸಿತು. ಮಂಗಳೂರು ಮತ್ತು ಉಡುಪಿಯ ಅನೇಕ ಶಾಲೆಗಳು, ಕಾಲೇಜುಗಳಿಂದ ಬಂದ ವಿದ್ಯಾರ್ಥಿಗಳು ದಿನವಿಡೀ ವಿವಿಧ STEM ಚಟುವಟಿಕೆಗಳು, ಕಲಾ–ಸಾಂಸ್ಕೃತಿಕ ಪ್ರದರ್ಶನಗಳಲ್ಲಿ ಭಾಗವಹಿಸಿದರು. ಎಲ್ಲೆಡೆ ಕಲಿಕೆ, ಪ್ರಯೋಗ ಮತ್ತು ಸಂಭ್ರಮದ ವಾತಾವರಣ ನೆಲೆಸಿತ್ತು.

ಕಾರ್ಯಕ್ರಮಕ್ಕೆ ಮಾನ್ಯ ಅತಿಥಿಗಳಾದ ಡಾ. ರಾಮಚಂದ್ರ ಹೆಬ್ಬಾರ್, ಪ್ರಧಾನ ವ್ಯವಸ್ಥಾಪಕರು, ಪ್ರಾದೇಶಿಕ ದೂರ ಸಂವೇದನ ಕೇಂದ್ರ – ದಕ್ಷಿಣ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ಬೆಂಗಳೂರು ಮತ್ತು ಡಾ. ಸಂತೋಷ್ ಕುಮಾರ್ ಕೆ.ಎ.ಎಸ್, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಘಟಕ, ದಕ್ಷಿಣ ಕನ್ನಡ ಇವರ ಸಾನ್ನಿಧ್ಯ ಲಭಿಸಿತು.

ಡಾ. ರಾಮಚಂದ್ರ ಹೆಬ್ಬಾರ್ ಅವರು ಮಕ್ಕಳು ವಿಜ್ಞಾನವನ್ನು ಪ್ರಶ್ನೆಗಳ ಮೂಲಕ, ಪ್ರಯೋಗಗಳ ಮೂಲಕ ಕಲಿಯುವುದು ತುಂಬಾ ಮುಖ್ಯ ಎಂದು ತಿಳಿಸಿದರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದಿನ ಯುವಕರಿಗೆ ಅಪಾರ ಅವಕಾಶಗಳಿವೆ ಎಂದು ಅವರು ಪ್ರೋತ್ಸಾಹಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಸಿಎಫ್ಎಎಲ್ ತಂಡ, ಮುಖ್ಯ ಅತಿಥಿಗಳು, ಪ್ರಾಂಶುಪಾಲರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ವೃಕ್ಷಾರೋಪಣಾ ಕಾರ್ಯಕ್ರಮ ನಡೆಸಿದರು. ಪರಿಸರ ಸಂರಕ್ಷಣೆಯಲ್ಲಿ ಕೆಲಸ ಮಾಡುತ್ತಿರುವ ಅಮರಾ ತಂಡಕ್ಕೆ ಈ ಸಂದರ್ಭದಲ್ಲಿ ಗೌರವ ಸಲ್ಲಿಸಲಾಯಿತು.

 

“ಸಣ್ಣ ಪ್ರಯತ್ನಗಳಿಂದಲೇ ದೊಡ್ಡ ಕಲ್ಪನೆಗಳು ಹುಟ್ಟುತ್ತವೆ” — ಟ್ರಸ್ಟಿ ಶ್ರೀ ವಿಜಯ್ ಮೋರಸ್

ಶ್ರೀ ವಿಜಯ್ ಮೋರಸ್ ಅವರು ಮೇಕರ್ಸ್ ಫೇಟ್ 10 ವರ್ಷಗಳ ಹಿಂದೆ 100 ಮಕ್ಕಳಿಂದ ಆರಂಭವಾಗಿ, ಇಂದು 1,500 ಮಕ್ಕಳಿಗೆ ವೇದಿಕೆ ಆಗಿರುವುದನ್ನು ಮೆಚ್ಚಿದರು. ಮಕ್ಕಳು ಪ್ರಯೋಗ ಮಾಡುವ, ತಪ್ಪುಗಳಿಂದ ಕಲಿಯುವಂತಹ ಈ ವೇದಿಕೆಯೇ ಅವರನ್ನ ನಿಜವಾದ ಸಮಸ್ಯೆ ಪರಿಹಾರಕರನ್ನಾಗಿ ರೂಪಿಸುತ್ತದೆ ಎಂದು ಹೇಳಿದರು.

ಮೈಲ್‌ಸ್ಟೋನ್ ಮಾರ್ಕೋ: CFAL ಮಕ್ಕಳ ರೋಬೋಟ್ ರಷ್ಯಾದ ಫೈನಲ್ಸ್‌ಗೆ! 

ಈ ವರ್ಷ ಮೇಕರ್ಸ್ ಫೇಟ್ ನಲ್ಲಿ CFAL ಮೇಕರ್ಸ್‌ಪೇಸ್ ವಿದ್ಯಾರ್ಥಿಗಳ ‘ಮೈಲ್‌ಸ್ಟೋನ್ ಮಾರ್ಕೋ’ ರೋಬೋಟ್ ಎಲ್ಲರ ಗಮನ ಸೆಳೆಯಿತು.  ಅದೇ ತಂಡ ಇದೀಗ ರಷ್ಯಾದ ಬ್ಯಾಟಲ್ ಆಫ್ ಬಾಟ್ಸ್ Grand Finaleಗೆ ಆಯ್ಕೆಯಾಗಿ, ಭಾರತದ ಪರವಾಗಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲಿದೆ. ಇದು CFAL ಗೆ ಮತ್ತು ಮಂಗಳೂರು–ಉಡುಪಿ ವಿದ್ಯಾರ್ಥಿಗಳಿಗೆ ದೊಡ್ಡ ಹೆಮ್ಮೆಯ ಕ್ಷಣ.

STEM ಚಟುವಟಿಕೆಗಳು, ವಿಜ್ಞಾನ ಪ್ರಯೋಗಗಳು, ಯಂತ್ರಮಾನವ ಪ್ರದರ್ಶನಗಳು, ಕಲಾ ಕಾರ್ಯಕ್ರಮಗಳು, ವಿದ್ಯಾರ್ಥಿಗಳ ನೃತ್ಯ–ಗಾನ, ಎಲ್ಲವೂ ಒಂದಾಗಿ ಕಾರ್ಯಕ್ರಮ ತುಂಬಾ ಜೀವಂತವಾಯಿತು. ಪೋಷಕರು–ಮಕ್ಕಳು ಸೇರಿ ಮಾಡಿದ ಸ್ಟಾಲ್‌ಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದವು.

ಮಕ್ಕಳ ಸೃಜನಶೀಲತೆಯ ಹಬ್ಬ

ಮಕ್ಕಳ ಉತ್ಸಾಹ, ಪೋಷಕರ ಬೆಂಬಲ ಮತ್ತು ಸಮುದಾಯದ ಸಕ್ರಿಯ ಭಾಗವಹಿಸುವಿಕೆಯಿಂದ Makers’ Fete 2025 ದೊಡ್ಡ ಯಶಸ್ಸಾಯಿತು. ವಿದ್ಯಾರ್ಥಿಗಳಲ್ಲಿ ವಿಜ್ಞಾನಪ್ರೇಮ, ಕುತೂಹಲ ಮತ್ತು ಪರಿಸರ ಜವಾಬ್ದಾರಿತ್ವ ಬೆಳೆಸುವ CFAL ನ ಸಂಕಲ್ಪ ಇನ್ನಷ್ಟು ಬಲವಾಗಿತು.