ನವದೆಹಲಿ: ಕರ್ನಾಟಕ ಸೇರಿದಂತೆ 6 ರಾಜ್ಯಗಳನ್ನು ಒಳಗೊಂಡ ಪಶ್ಚಿಮ ಘಟ್ಟದ 56800 ಚದರ ಕಿಲೋಮೀಟರ್‌ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಹೊಸ ಕರಡು ವರದಿಯನ್ನು ಕೇಂದ್ರ ಸರ್ಕಾರ ಶುಕ್ರವಾರ ಪ್ರಕಟಿಸಿದೆ. ಇದರಲ್ಲಿ ಇತ್ತೀಚೆಗೆ ಭೂಕುಸಿತಕ್ಕೆ ತುತ್ತಾದ ಕೇರಳದ ವಯನಾಡು ಜಿಲ್ಲೆಯ 13 ಗ್ರಾಮಗಳು ಕೂಡಾ ಸೇರಿವೆ.

ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಿದ ಪ್ರದೇಶಗಳಲ್ಲಿ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಮರಳು ಗಣಿಗಾರಿಕೆ ಮೇಲೆ ಸಂಪೂರ್ಣ ನಿಷೇಧ ಹೇರಬೇಕು ಎಂಬ ಅಂಶ ವರದಿಯಲ್ಲಿದೆ.ಈ ಕರಡು ವರದಿ ಕುರಿತು ಕೇಂದ್ರ ಸರ್ಕಾರ ಸಾರ್ವಜನಿಕರಿಂದ 60 ದಿನಗಳ ಒಳಗೆ ಸಲಹೆ, ಆಕ್ಷೇಪಗಳನ್ನು ಆಹ್ವಾನಿಸಿದೆ. ಈ ವರದಿ, ಹಿಂದಿನ ವರದಿಯ ವಿಸ್ತೃತ ರೂಪವಾಗಿದೆ. ಪ್ರದೇಶವಾರು ಯಾವುದೇ ಹೆಚ್ಚಿನ ಬದಲಾವಣೆ ಇಲ್ಲ. ಅಂತಿಮವಾಗಿ ಇದೇ ವರದಿಯೇ ಅಧಿಸೂಚನೆಯಾಗಿ ಪ್ರಕಟವಾಗಬಹುದು ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವರದಿ ಅನ್ವಯ ಗುಜರಾತ್‌ನ 449 ಚದರ ಕಿ.ಮೀ., ಮಹಾರಾಷ್ಟ್ರದ 17340 ಚದರ ಕಿ.ಮೀ., ಗೋವಾದ 1461 ಚದರ ಕಿ.ಮೀ., ಕರ್ನಾಟಕದ 20668 ಚದರ ಕಿ.ಮೀ., ತಮಿಳುನಾಡಿನ 6914 ಚದರ ಕಿ.ಮೀ., ಕೇರಳದ 9993 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ವರದಿ ಹೇಳಿದೆ.

2014ರ ಬಳಿಕ ಕೇಂದ್ರ ಸರ್ಕಾರ ಒಟ್ಟು 6 ಕರಡು ಅಧಿಸೂಚನೆ ಪ್ರಕಟಿಸಿದೆ. ಆದರೆ ವಿವಿಧ ರಾಜ್ಯಗಳ ವಿರೋಧದ ಕಾರಣ ಇನ್ನೂ ಅಂತಿಮ ಅಧಿಸೂಚನೆ ಹೊರಡಿಸುವುದು ಸಾಧ್ಯವಾಗಿಲ್ಲ.ಕೇರಳದಲ್ಲಿ ಭೂಕುಸಿತಕ್ಕೆ 300ಕ್ಕೂ ಹೆಚ್ಚು ಜನರು ಬಲಿಯಾದ ಹೊತ್ತಿನಲ್ಲೇ ಸರ್ಕಾರ ಈ ವರದಿ ಪ್ರಕಟಿಸಿದೆ. ಪರಿಸರ ಸೂಕ್ಷ್ಮ ವಲಯದಲ್ಲಿನ ಅರಣ್ಯ ನಾಶ, ಭಾರೀ ಗಣಿಗಾರಿಕೆ ಮತ್ತು ಹವಾಮಾನ ಬದಲಾವಣೆಯೇ ಘಟ್ಟ ಪ್ರದೇಶಗಳಲ್ಲಿ ದುರಂತಕ್ಕೆ ಕಾರಣ ಎಂದು ವಿಜ್ಞಾನಿಗಳ ಬಲವಾಗಿ ಹೇಳಿರುವುದನ್ನು ವರದಿ ಪ್ರಸ್ತಾಪಿಸಿದೆ.

ಘೋಷಿತ ಪ್ರದೇಶಗಳಲ್ಲಿ ಹೊಸ ಉಷ್ಣ ವಿದ್ಯುತ್ ಸ್ಥಾವರಗಳ ಸ್ಥಾಪನೆಗೆ ಅವಕಾಶ ನೀಡಬಾರದು. ಒಂದು ವೇಳೆ ಹಾಲಿ ಉಷ್ಣ ಸ್ಥಾವರಗಳು ಕಾರ್ಯ ನಿರ್ವಹಿಸುತ್ತಿದ್ದರೆ ಅವುಗಳನ್ನು ಮುಂದುವರೆಸಬಹುದು. ಆದರೆ ಅವುಗಳ ವಿಸ್ತರಣೆಗೆ ಅವಕಾಶ ನೀಡಬಾರದು. ಈ ಪ್ರದೇಶಗಳಲ್ಲಿ ಈಗಾಗಲೇ ನಡೆಯುತ್ತಿರುವ ಕಟ್ಟಡಗಳ ದುರಸ್ತಿ ಕಾಮಗಾರಿ ಹೊರತುಪಡಿಸಿ, ದೊಡ್ಡ ಮಟ್ಟಿಗಿನ ನಿರ್ಮಾಣ ಕಾಮಗಾರಿ, ಟೌನ್‌ಶಿಪ್‌ ನಿರ್ಮಾಣ ಮಾಡುವುದಕ್ಕೆ ನಿರ್ಬಂಧ ವಿಧಿಸಬೇಕು ಎಂದು ವರದಿ ಹೇಳಿದೆ.