ಮಂಗಳೂರು: ಒಡಿಯೂರು ಶ್ರೀ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘ ಮತ್ತು ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಮಂಗಳೂರು, ಮಂಗಳೂರು ಇನ್ಸಿಟ್ಯೂಟ್ ಆಫ್ ಆಂಕೊಲಾಜಿ ಮಂಗಳೂರು ಇವುಗಳ ಸಹಭಾಗಿತ್ವದಲ್ಲಿ ಕ್ಯಾನ್ಸರ್ ಬೆಂಬಲ ಕಾರ್ಯಕ್ರಮವು ಇಂದು ಒಡಿಯೂರು ಶ್ರೀ ಸಹಕಾರ ಸಂಘದ ಪ್ರಾದೇಶಿಕ ಕಛೇರಿ ಲೋಟಸ್ ಗ್ಯಾಲಕ್ಸಿ, ಪಂಪುವೆಲ್ ಮಂಗಳೂರು ಇಲ್ಲಿ ಜರಗಿತು.

ಸಹಕಾರಿಯ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಎ. ಸುರೇಶ್ ರೈ ಇವರು ಅತಿಥಿಗಳನ್ನು ಸ್ವಾಗತಿಸುತ್ತಾ, ಒಡಿಯೂರಿನ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸಮಾಜಮುಖಿಯಾಗಿ ಮಾಡುತ್ತಿರುವ ಕೆಲಸಗಳನ್ನು ಶ್ಲಾಘಿಸುತ್ತಾ, ಸಹಕಾರಿಯ ವತಿಯಿಂದ ಸುಸ್ಥಿರ ಸಾವಯವ ಕೃಷಿಗೆ ಉತ್ತೇಜನ ನೀಡುವುದರೊಂದಿಗೆ ಮಾರಕರೋಗಗಳು ಜನರಿಗೆ ಬಾಧಿಸದಂತೆ ಮುಂಜಾಗ್ರತಾ ಕ್ರಮಗಳ ತರಬೇತಿಯನ್ನು ದ.ಕ. ಜಿಲ್ಲೆಯಾದ್ಯಂತ ಕೃಷಿಕರಿಗೆ ನೀಡಲಾಗಿತ್ತು. ಇದರಿಂದ ಕ್ಯಾನ್ಸರ್‌ನಂತಹ ಗಂಭೀರ ರೋಗಗಳು ಬಾರದಂತೆ ತಡೆಗಟ್ಟುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದರು.

ಕ್ಯಾನ್ಸರ್ ಕಾಯಿಲೆಯನ್ನು ಪತ್ತೆ ಮಾಡಿ ಆರಂಭದಲ್ಲಿಯೇ ತಡೆಗಟ್ಟುವ ಬಗ್ಗೆ ಮಾಹಿತಿಯನ್ನು ವೈದ್ಯರಿಂದ ಪಡೆದುಕೊಳ್ಳಬೇಕು ಎಂದರು. ಕ್ಯಾನ್ಸರ್ ಬಾಧಿತರಿಗೆ ನಾವು ಯಾವ ರೀತಿಯಲ್ಲಿ ಬೆಂಬಲವಾಗಿ ನಿಲ್ಲಬಹುದು ಮತ್ತು ಅವರ ಸೇವೆಯಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು ಎಂಬುದರ ಬಗ್ಗೆ ಸಹಕಾರಿಯ ಎಲ್ಲಾ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುವುದು ಎಂದರು. ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಬೆಂಬಲವಾಗಿ ನಿಲ್ಲುವವರು, ಕ್ಯಾನ್ಸರ್ ಜೊತೆ ಹೋರಾಟದಲ್ಲಿ ನಮ್ಮೊಂದಿಗೆ ಕೈ ಜೋಡಿಸುವವರು ನಮ್ಮ ಸಹಕಾರಿ ಸಂಘದ ಯಾವುದೇ ಶಾಖೆಯನ್ನು ಸಂಪರ್ಕಿಸಬಹುದಾಗಿದೆ ಎಂದರು.

ಮಂಗಳೂರು ಇನ್ಸಿಟ್ಯೂಟ್ ಆಫ್ ಆಂಕೊಲಾಜಿ ಮಂಗಳೂರು ಇಲ್ಲಿಯ ಅಂಕಾಲಜಿಸ್ಟ್ ವೈದ್ಯರು ಮತ್ತು ಸಂಸ್ಥೆಯ ನಿರ್ದೇಶಕರಾದ ಡಾ. ಸುರೇಶ್ ರಾವ್ ಇವರು ಮಾತನಾಡುತ್ತಾ ದಿನದಿಂದ ದಿನಕ್ಕೆ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ನಮ್ಮ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಪ್ರಕರಣಗಳಿಗೆ ದಾಖಲಾಗುತ್ತಿರುವವರ ಸಂಖ್ಯೆಯು ಹೆಚ್ಚಳವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಈ ಮಾರಕರೋಗ ಬಾಧಿಸಿದರೆ ಚಿಕಿತ್ಸೆಯ ವೆಚ್ಚವನ್ನು ಬರಿಸಲಾಗಿದೆ ಸಂಕಷ್ಟಗಳಿಗೆ ಸಿಲುಕುತ್ತಿದ್ದಾರೆ. ಅವರಿಗೆ ಸಹಾಯವಾಗಲೆಂದು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಡಾ. ವೆಂಕಟರಮಣ ಕಿಣಿ ಮಾತನಾಡಿ ಕ್ಯಾನ್ಸರ್ ಒಂದು ಸವಾಲಾಗಿ ಪರಿಣಮಿಸಿದೆ. ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ನಾವೆಲ್ಲರೂ ಕೈ ಜೋಡಿಸಬೇಕು. ಕ್ಯಾನ್ಸರ್ ಬೆಂಬಲ ಕಾರ್ಯಕ್ರಮ ಆಸರೆ ಯೋಜನೆಯಡಿಯಲ್ಲಿ ಪ್ರತಿ ವರ್ಷ ಒಬ್ಬ ವ್ಯಕ್ತಿಗೆ ದಿನಕ್ಕೆ ಒಂದು ರೂಪಾಯಿಯಂತೆ 1 ವರ್ಷಕ್ಕೆ ರೂ. 365.00 ದಾನಿಗಳು ದೇಣಿಗೆ ನೀಡಬಹುದಾಗಿದೆ. ಇದರಿಂದ ಕ್ಯಾನ್ಸರ್ ಬಾಧಿತ ರೋಗಿ ರೂ. 3 ಲಕ್ಷದ ವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯುತ್ತಾರೆ.

ದಾನಿಗಳಲ್ಲಿ ಕ್ಯಾನ್ಸರ್ ಪತ್ತೆಯಾದರೆ ಟ್ರಸ್ಟ್ ಮೂಲಕ ಉಚಿತ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಈ ಯೋಜನೆಯಡಿಯಲ್ಲಿ ರೂ. 3,650.00 ದೇಣಿಗೆ ನೀಡಿದರೆ 10 ವರ್ಷಗಳ ಅವಧಿ ತನಕ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತದೆ. ಅಭಯ ಯೊಜನೆಯಡಿಯಲ್ಲಿ ಪ್ರತಿ ವರ್ಷ ಒಬ್ಬ ವ್ಯಕ್ತಿಗೆ ದಿನಕ್ಕೆ 5 ರೂಪಾಯಿಯಂತೆ 1 ವರ್ಷಕ್ಕೆ ರೂ. 1,825.00 ರೂಪಾಯಿಯನ್ನು ದಾನಿಗಳು ದೇಣಿಗೆ ನೀಡಬಹುದು. ಇದರಿಂದ ರೋಗಿಗೆ ರೂ.10 ಲಕ್ಷ ವರೆಗಿನ ಉಚಿತ ಚಿಕಿತ್ಸೆಯನ್ನು ಪಡೆಯುತ್ತಾರೆ ಮತ್ತು ಯೋಜನೆಯಡಿಯಲ್ಲಿ ದೇಣಿಗೆ ನೀಡಿದ ದಾನಿಗಳಲ್ಲಿ ಕ್ಯಾನ್ಸರ್ ಪತ್ತೆಯಾದರೆ ಟ್ರಸ್ಟ್ ಮೂಲಕ ಉಚಿತ ಚಿಕಿತ್ಸೆಗಳನ್ನು ನೀಡಲಾಗುತ್ತದೆ ಹಾಗೂ ಈ ಯೋಜನೆಯಡಿಯಲ್ಲಿ ರೂ. 18,250 ದೇಣಿಗೆ ನೀಡಿದರೆ 10 ವರ್ಷಗಳ ಅವಧಿ ತನಕ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಇದರ ಅಧಿಕಾರಿಗಳಾದ ಶ್ರೀ ದುರ್ಗಾದಾಸ್ ಅಡಪ, ಶ್ರೀ ತ್ರಿವಿಕ್ರಮ, ದಿವ್ಯಶ್ರೀ, ಕಿರಣ್, ತರ್ಜನಿ ಕಮ್ಯುನಿಕೇಶನ್ಸ್ ಕಾರ್ಯವಾಹಕ ನಿರ್ದೇಶಕರು ಶ್ರೀ ಶೇಷಗಿರಿ ಕೆ.ಜಿ ಮತ್ತು ಒಡಿಯೂರು ಶ್ರೀ ಸೌಹಾರ್ದ ಸಹಕಾರಿಯ ಸಿಇಒ ಶ್ರೀ ದಯಾನಂದ ಶೆಟ್ಟಿ ಬಾಕ್ರಬೈಲ್, ಎಜಿಎಂ ಶ್ರೀ ತಾರಾನಾಥ ಶೆಟ್ಟಿ ಉಪಸ್ಥಿತರಿದ್ದರು.