ಮಂಗಳೂರು: ಬಿಜೆಪಿ ವಿಜಯೋತ್ಸವ ಮೆರವಣಿಗೆ ಬಳಿಕ ಇಬ್ಬರಿಗೆ ಚೂರಿ ಇರಿದ ಘಟನೆ ನಡೆದಿತ್ತು. ಇರಿತಕ್ಕೆ ಒಳಗಾದ ಇಬ್ಬರು ಕಾರ್ಯಕರ್ತರು ಮಂಗಳೂರಿನ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಹಿನ್ನೆಲಯಲ್ಲಿ ಇಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಭೇಟಿ ನೀಡಿ ಇರಿತಕ್ಕೆ ಒಳಗಾದ ಇಬ್ಬರು ಕಾರ್ಯಕರ್ತರ ಆರೋಗ್ಯ ವಿಚಾರಿಸಿದರು. ಆರ್.ಅಶೋಕ್ ಗೆ ನೂತನ ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಡಾ.ಭರತ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸಾಥ್ ನೀಡಿದರು.

ಘಟನೆ ಬಗ್ಗೆ ಬಿಜೆಪಿ ನಾಯಕರಿಂದ ಮಾಹಿತಿ ಪಡೆದ ಆರ್.ಅಶೋಕ್ ಅವರು, ಕಾರ್ಯಕರ್ತರ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಜೂ.9ರಂದು ಬೋಳಿಯಾರ್ ನಲ್ಲಿ ಬಿಜೆಪಿ ವಿಜಯೋತ್ಸವದ ವೇಳೆ ಚೂರಿ ಇರಿತವಾಗಿತ್ತು. ಇರಿತಕ್ಕೊಳಗಾದ ಹರೀಶ್ ಮತ್ತು ನಂದಕುಮಾರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಐದು ಮಂದಿ ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಪ್ರಚೋದನಕಾರಿ ಘೋಷಣೆ ಆರೋಪದಡಿ ಬಿಜೆಪಿ ಕಾರ್ಯಕರ್ತರ ವಿರುದ್ದವೂ ಎಫ್ಐಆರ್ ದಾಖಲಾಗಿದೆ. ಆಸ್ಪತ್ರೆ ಭೇಟಿ ಬಳಿಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಶೋಕ್ ಸುದ್ದಿಗೋಷ್ಠಿ ನಡೆಸಿದರು.

