ಮಂಗಳೂರು : ಯಾವುದೇ ರಾಷ್ಟ್ರದಲ್ಲಿ ಅಲ್ಲಿನ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ದಾಳಿ ಖಂಡನೀಯವಾಗಿದ್ದು, ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನೂ ವಿರೋಧಿಸಬೇಕಾಗಿದೆ. ಆದರೆ ಅದಕ್ಕಾಗಿ ಬಿಜೆಪಿ ಮಂಗಳೂರಿನಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟಿಸುವ ಬದಲು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕೇಂದ್ರ ಸರಕಾರ ಪ್ರತಿಭಟಿಸುವಂತೆ ಒತ್ತಡ ಹೇರುವ ಕಾರ್ಯ ಮಾಡಲಿ ಎಂದು ಕೆಪಿಸಿಸಿ ಉಪಾಧ್ಯಕ್ಷ, ಕಾಂಗ್ರೆಸ್‌ನ ಹಿರಿಯ ಮುಖಂಡ ರಮಾನಾಥ ರೈ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮತೀಯ ಸೂಕ್ಷ್ಮ ಪ್ರದೇಶವಾದ ಮಂಗಳೂರಿನಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟಿಸುವ ಮೂಲಕ ಬಿಜೆಪಿ ದ್ವೇಷ ಬಿತ್ತುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದರು.

ಯಾವುದೇ ದೇಶದಲ್ಲಿ ಅಲ್ಲಿನ ಅಲ್ಪಸಂಖ್ಯಾತರ ಹಿತ ಕಾಯುವುದು ಆ ದೇಶದ ಆಡಳಿತ ಚುಕ್ಕಾಣಿ ಹಿಡಿದವರ ಕರ್ತವ್ಯ ಬಾಂಗ್ಲಾ ಆಗಿರಲಿ, ಶ್ರೀಲಂಕವಾಗಲಿ ಅಥವಾ ನೆರೆಯ ಪಾಕಿಸ್ತಾನವಾಗಲಿ ಅಲ್ಲಿನ ಸರಕಾರ ರಾಜಧರ್ಮ ಹೊಣೆಗಾರಿಕೆಲ್ಲಿ ವಿಫಲ ಆದಾಗ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅದನ್ನು ಪ್ರಶ್ನಿಸಿ ಪ್ರತಿಭಟಿಸಬೇಕು. ಅದು ಬಿಟ್ಟು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಖಂಡನೀಯ ಕೃತ್ಯದ ವಿರುದ್ಧ ಮಂಗಳೂರಿನ ರಸ್ತೆ ಬಂದ್ ಮಾಡಿ ಪ್ರತಿಭಟಿಸುವುದು ಸಮಂಜಸವಲ್ಲ. ಬಾಂಗ್ಲಾದ ದೂತಾವಾಸದ ಎದುರು ಬಿಜೆಪಿ ಪ್ರತಿಭಟಿಸಲಿ ಎಂದು ಹೇಳಿದರು.