ಮಂಗಳೂರು: ಬಿಜೆಪಿ ಪ್ರಕಾರ ದೇಶದ ಹಿಂದೂಗಳು ಭಯಭೀತರಾಗಿದ್ದಾರೆ. ಅರಾಜಕತೆಯಲ್ಲಿದ್ದಾರೆ. ಬಿಜೆಪಿಯವರು ಭಯ ಸೃಷ್ಟಿಸುತ್ತಿದ್ದಾರೆ. ಈ ಮೂಲಕ ಹಿಂದೂಗಳು ನಮಗೆ ದೇಶದಲ್ಲಿ ಭದ್ರತೆಯಿಲ್ಲ, ಅನ್ಯಾಯ ಆಗುತ್ತದೆಂದು ಅನ್ನಿಸುವಂತೆ ಮಾಡುವುದೇ ಇವರ ಅಜೆಂಡಾ. ಇಂತಹ ಅಜೆಂಡಾವನ್ನು ಉಪಯೋಗಿಸಿಕೊಂಡು ದೇಶ ಆಳುವುದಕ್ಕೆ ಹೊರಟಿದ್ದಾರೆ. ಆದರೆ ಇಂತಹ ಪರಿಸ್ಥಿತಿ ದೇಶದಲ್ಲಿ ಇಲ್ಲವೇ ಇಲ್ಲ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ದೇಶದ ಆರ್ಥಿಕ ಪರಿಸ್ಥಿತಿ ಕೆಟ್ಟುಹೋಗಿದೆ. ಮನಮೋಹನ್ ಸಿಂಗ್ ಸರಕಾರ ಇದ್ದಾಗ ಮೋದಿಯವರು ಭಾಷಣ ಬಿಗಿಯುತ್ತಿದ್ದರು. ಆದರೆ ಈಗ ದೇಶದ ರೂಪಾಯಿ ಮೌಲ್ಯ ಅಮೇರಿಕಾ ಡಾಲರ್ ಜೊತೆಯಲ್ಲ ಪಾಕಿಸ್ತಾನ, ಬಾಂಗ್ಲಾದೇಶದ ಕರೆನ್ಸಿ ಮೌಲ್ಯಕ್ಕಿಂತಲೂ ಕೆಳಮಟ್ಟಕ್ಕೆ ಕುಸಿದಿದೆ‌. ಆದ್ದರಿಂದ ಮೋದಿಯವರ ವಿದೇಶಾಂಗ ನೀತಿ, ಆರ್ಥಿಕ ಶಕ್ತಿ ಏನೆಂದೇ ಅರ್ಥ ಆಗುವುದಿಲ್ಲ ಎಂದರು.

ವಿಶ್ವಮಟ್ಟದಲ್ಲಿ ಭಾರತ ಸೂಪರ್ ಪವರ್ ಎಂದು ಬಿಂಬಿಸುತ್ತಿದ್ದರು. ಆದರೆ ದೇಶದ ಜಿಡಿಪಿ ಆರನೇ ಸ್ಥಾನಕ್ಕೆ ಇಳಿದಿದೆ. ದೇಶದಲ್ಲಿ ಅರಾಜಕತೆ ಎಷ್ಟಿದೆ ಎಂದರೆ ಕಾಕ್ರೋಚ್ ಜನತಾ ಪಾರ್ಟಿಗೆ ಸಬ್‌ಸ್ಕ್ರಿಪ್ಷನ್ ಬಿಜೆಪಿ ಪಕ್ಷದ ಸಬ್‌ಸ್ಕ್ರಿಪ್ಷನ್‌ಗಿಂತ ಹೆಚ್ಚಾಗಿದೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಸಭೆಯಲ್ಲಿ ‘ನಾನು ಕಾಕ್ರೋಚ್’ ಘೋಷಣೆ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ಈ ಸಂದರ್ಭ ದಿನೇಶ್ ಗುಂಡೂರಾವ್ ಹೇಳಿದರು.