ಮಂಗಳೂರು: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದ ಪರಿಷತ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಅವರು 1600 ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಮತ ಎಣಿಕಾ ಪ್ರಕ್ರಿಯೆ ಮಂಗಳೂರಿನ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನೆರವೇರಿತು. ಒಟ್ಟು 5,906 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು, 12 ಮೇಜುಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆದಿದೆ. ಪ್ರತಿ ಮೇಜಿಗೆ ಕಣ್ಗಾವಲು ಮತ್ತು ಸಹಾಯಕ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಮಿಶ್ರಣ ಮತ್ತು ಸಿಂಧುತ್ವ ಪರಿಶೀಲನೆಯ ನಂತರ, ಮೊದಲ ಪ್ರಾಶಸ್ತ್ಯದ ಮತಗಳ ಅಂತಿಮ ಎಣಿಕೆ ನಡೆಸಲಾಯಿತು.
ಕೋಟ ಶ್ರೀನಿವಾಸ ಪೂಜಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಬಳಿಕ, ದಕ್ಷಿಣ ಕನ್ನಡದಲ್ಲಿ ತೆರವಾದ ವಿಧಾನಪರಿಷತ್ ಸ್ಥಾನಕ್ಕೆ ಅ. 21ರಂದು ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಕಿಶೋರ್ ಕುಮಾರ್ ಪುತ್ತೂರು ತಮ್ಮ ಮುಖ್ಯ ಪ್ರತಿಸ್ಪರ್ಧಿ, ಕಾಂಗ್ರೆಸ್‌ನ ರಾಜು ಪೂಜಾರಿ ವಿರುದ್ಧ ಗೆಲುವು ಸಾಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

