ಬಂಟ್ವಾಳ: ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಣಿ ನಾಲ್ಕೂರು ಗ್ರಾಮದ ಪೂಂಜೂರು ಎಂಬಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ದಿನಾಂಕ 03-07-2025 ರಿಂದ 22-07-2025 ರ ನಡುವೆ ಸುಮಾರು 45 ಪ್ಲಾಸ್ಟಿಕ್ ಚೀಲಗಳಲ್ಲಿ ರೂಪಾಯಿ 2,20,000 ಮೌಲ್ಯದ ಒಣ ಅಡಿಕೆ ಕಳವಾಗಿದ್ದು, ಸಂಬಂಧಿಸಿದ ಪ್ರಕರಣವನ್ನು ದಿನಾಂಕ 23-07-2025 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 112/2025 ಕಲಂ 306 ಬಿ.ಎನ್.ಎಸ್ ಅಡಿಯಲ್ಲಿ ದಾಖಲಿಸಲಾಗಿತ್ತು.

ಈ ಪ್ರಕರಣದ ಪತ್ತೆ ಕಾರ್ಯವನ್ನು ನಿರ್ವಹಿಸಲು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ನಿರೀಕ್ಷಕರಾದ ಶ್ರೀ ಶಿವಕುಮಾರ ಬಿ. ಅವರ ನೇತೃತ್ವದಲ್ಲಿ, ಉಪನಿರೀಕ್ಷಕರಾದ ಮಂಜುನಾಥ್ ಟಿ., ಎಎಸ್‌ಐ ಜಿನ್ನಪ್ಪ ಗೌಡ ಹಾಗೂ ಹೆಡ್‌ಕಾನ್ಸ್‌ಟೇಬಲ್‌ ರಾಜೇಶ್, ನಝೀರ್, ಲೋಕೇಶ್, ಪ್ರಶಾಂತ್ ಹಾಗೂ ಕಾನ್ಸ್‌ಟೇಬಲ್‌ ಮಾರುತಿ ಮತ್ತು ಹನುಮಂತ ಅವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

ತನ್ನಿಖೆಯ ಹಿನ್ನೆಲೆಯಲ್ಲಿ, ಪೊಲೀಸರು ದಿನಾಂಕ 28-07-2025 ರಂದು ಆರೋಪಿಯೊಬ್ಬನಾದ ಸತೀಶ್ (ವಯಸ್ಸು 29), ನಿವಾಸಿ ಪೈಚಾರು ಗ್ರಾಮ, ಸುಳ್ಯ ಎಂಬಾತನನ್ನು ಬಂಧಿಸಿದ್ದು, ಆತನಿಂದ ರೂ. 74,000 ಮೌಲ್ಯದ 15 ಚೀಲ ಒಣ ಅಡಿಕೆ ಹಾಗೂ ಕಳವು ಅಡಿಕೆಯನ್ನು ಮಾರಾಟ ಮಾಡಿ ಪಡೆದ ನಗದು ರೂ. 70,000 ಅನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ, ಆರೋಪಿಯು ಕೃತ್ಯಕ್ಕೆ ಬಳಸಿದ ಅಂದಾಜು ರೂ. 80,000 ಮೌಲ್ಯದ ಆಪೆ ಗೂಡ್ಸ್ ವಾಹನವನ್ನೂ ಜಪ್ತಿ ಮಾಡಲಾಗಿದೆ.

ಒಟ್ಟು ರೂ. 2,24,000 ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಳ್ಳಿದ್ದು, ಬಂಧಿತನನ್ನು ಮಾನ್ಯ ಬಂಟ್ವಾಳ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.