ಮಂಗಳೂರು : ‘ಅಪ್ರಾಪ್ತ ಯುವಕ ದಿಗಂತ್ ಕಾಣೆಯಾಗಿದ್ದ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿತ್ತು. ಆದರೆ ಸಂಘ ಪರಿವಾರ ಮತ್ತು ಬಿಜೆಪಿ ಶಾಸಕರು ಕಾಣೆಯಾದ ತಕ್ಷಣ ಮತೀಯ ಬಣ್ಣ ಹಚ್ಚಿ ಮುಸ್ಲಿಮರೇ ಅಪಹರಿಸಿ ಆತನ ಪ್ರಾಣಕ್ಕೆ ಅಪಾಯ ಮಾಡಿರುವ ರೀತಿ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದರು.

ಒಂದು ಸಮುದಾಯ ಮೇಲೆ ಈ ರೀತಿ ನಿರಂತರವಾಗಿ ಆರೋಪಗಳನ್ನು ಹೊರಿಸುತ್ತಾ ಹೋದಲ್ಲಿ ಅವರ ಪ್ರತಿಕ್ರಿಯೆ ಹೇಗಿರುತ್ತದೆ. ಕೊಣಾಜೆಯಲ್ಲಿ ಕಾರ್ತಿಕ್‌ನ ಕೊಲೆಯಾದ ಸಂದರ್ಭದಲ್ಲಿಯೂ ಇಲ್ಲಿ ಸಂಸದರಾಗಿದ್ದವರು ಜಿಲ್ಲೆಗೆ ಬೆಂಕಿ ಹಚ್ಚುವ ಪ್ರಚೋದನೆಯ ಮಾತುಗಳನ್ನಾಡಿದರು. ಕೊನೆಗೆ ಅದು ಕೌಟುಂಬಿಕ ಕಲಹದ ಕೊಲೆ ಎಂದು ಸಾಬೀತಾಯಿತು.

ನಿನ್ನೆ ಮತ್ತೆ ಕೊರಗಜ್ಜನ ಹೆಸರಿನಲ್ಲಿ ಪ್ರಚೋದನಕಾರಿ ಭಾಷಣ ಮಾಡಲಾಗಿದೆ. ಕೊರಗ ತನಿಯ ಕಾರ್ನಿಕದ ದೈವ. ಆದಿವಾಸಿಗಳ ಸಾಂಸ್ಕೃತಿಕ ನಾಯಕನ ಹೆಸರಿನಲ್ಲಿ ಮುಸ್ಲಿಮರ ವಿರುದ್ಧ ಮಾತನಾಡಲಾಗಿದೆ. ಬಿಜೆಪಿಯವರಿಗೆ ಈ ರೀತಿ ಪ್ರಚೋದನೆ ನೀಡಿ ಇನ್ನೊಂದು ಸಮುದಾಯ ತಿರುಗಿ ಬೀಳುವುದು ಬೇಕಾಗಿದೆ. ಹೆಣದ ಮೇಲೆ ರಾಜಕೀಯಕ್ಕೆ ಹಾತೊರೆಯುತ್ತಿದ್ದಾರೆ.

ಸ್ಪೀಕರ್ ಖಾದರ್ ಅವರು ಸ್ವಯಂ ಪ್ರೇರಣೆಯಿಂದ ದಿಗಂತ್ ನಾಪತ್ತೆ ಪ್ರಕರಣವನ್ನು ಪ್ರಸ್ತಾಪಿಸಿದ್ದರು. ಇದೀಗ ಮತ್ತೆ ಅವರದ್ದೇ ಕ್ಷೇತ್ರದಲ್ಲಿ ಕೊರಗ ತನಿಯನ ಎದುರು ಪ್ರಚೋದನಕಾರಿ ಭಾಷಣ ಮಾಡಲಾಗಿದೆ. ಈ ಎರಡೂ ವಿಚಾರಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾಗಬೇಕು.

ಸರಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಕೋಮು ದ್ವೇಷ ಹರಡುವ, ಪ್ರಚೋದನೆಕಾರಿ ಹೇಳಿಕೆ ನೀಡುವವರು ಯಾರೇ ಆಗಿದ್ದರೂ ಜಾತಿ ಮತ ಬೇಧವಿಲ್ಲದೆ ಮುಲಾಜಿಲ್ಲದೆ ಕಾನೂನು ಕ್ರಮ ಆಗಬೇಕು.

ಪು ‘ಉಪ ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಈಗಾಗಲೇ ಮಂಗಳೂರು ಸಂಜೆ 7 ಗಂಟೆಗೇ ನಿಶ್ಯಬ್ದವಾಗುತ್ತದೆ ಎಂಬ ಮಾತುಗಳನ್ನಾಡಿದ್ದಾರೆ. ಈ ರೀತಿಯ ಕೋಮು ಪ್ರಚೋದನೆಯ ಪ್ರಕರಣಗಳು ಮುಂದುವರಿದರೆ ಸಂಜೆ 5 ಗಂಟೆಗೇ ನಿರ್ಜನವಾಗಲಿದೆ. ಇದಕ್ಕೆ ಅವಕಾಶವನ್ನು ಪೊಲೀಸರಾಗಲಿ, ಸರಕಾರವಾಗಲಿ ನೀಡಬಾರದು. ಎಂದು ಮುನೀರ್ ಕಾಟಿಪಳ್ಳ ಹೇಳಿದರು.