ಮಂಗಳೂರು:  ಮಂಗಳೂರಿನ ಕೊಡಿಯಾಲ್ ಬೈಲ್ ಪ್ರತಿಷ್ಠಿತ ಬಿಲ್ಡರ್, ಬಿಜೆಪಿ ಮುಖಂಡ ಜಿತೇಂದ್ರ ಕೊಟ್ಟಾರಿ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಇಬ್ಬರು ಯುವಕರು ಮುಖಂಡನ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಸದ್ಯ ಬರ್ಕೆ ಪೊಲೀಸರು ಆರೋಪಿಗಳಾದ ಎನ್ ಎಸ್ ಯುಐ ಕಾರ್ಯಕರ್ತ ಅನುಷ್ ಶೆಟ್ಟಿ ಹಾಗೂ ಅಂಕಿತ್ ಶೆಟ್ಟಿ ಇವರನ್ನು ಬಂಧಿಸಿದ್ದಾರೆ.

ನಿನ್ನೆ ರಾತ್ರಿ ಮಂಗಳೂರು ಏರ್ಪೋರ್ಟ್ ಗೆ ಅಗಮಿಸಿದ್ದ ಜಿತೇಂದ್ರ ಕೊಟ್ಟಾರಿ, ಬೆಂಗಳೂರಿನಿಂದ ಆಗಮಿಸಿದ್ದ ಮಗಳನ್ನು ಕರೆ ತರಲು ಏರ್ಪೋರ್ಟ್ ಗೆ ಆಗಮಿಸಿದ್ದರು. ಬಳಿಕ ತನ್ನ ಆಡಿ ಕಾರಿನಲ್ಲಿ ಮಗಳ ಜೊತೆ ಮಂಗಳೂರಿನ ಮನೆಯತ್ತ ತೆರಳುತ್ತಿದ್ದರು, ಈ ವೇಳೆ ಅನುಷ್ ಶೆಟ್ಟಿ ಹಾಗೂ ಅಂಕಿತ್ ಇದ್ದ ಕಾರನ್ನು ಜಿತೇಂದ್ರ ಕೊಟ್ಟಾರಿ  ಓವರ್ ಟೇಕ್ ಮಾಡಿದ್ದಾರೆ. ಇದೇ ಕೋಪದಲ್ಲಿ ಕಾರನ್ನು ಹಿಂಬಾಲಿಕೊಂಡು ಜಿತೇಂದ್ರ ಕೊಟ್ಟಾರಿ ಮನೆಯ ಬಳಿಗೆ  ಯುವಕರು ಬಂದಿದ್ದಾರೆ.

ಕುಡಿತದ ಮತ್ತಿನಲ್ಲಿ ಜಿತೇಂದ್ರ ಕೊಟ್ಟಾರಿ ಮನೆಗೆ ನುಗ್ಗಿದ ಅವರು  ಗಲಾಟೆ ಮಾಡಿದ್ದಾರೆ. ಅಲ್ಲದೇ ಜಿತೇಂದ್ರ ಕೊಟ್ಟಾರಿ ಮೇಲೆ ಹಲ್ಲೆ ನಡೆಸಿದ್ದು ತಡೆಯಲು ಬಂದ ಪತ್ನಿ ಮೇಲೂ ಹಲ್ಲೆಗೆ ಯತ್ನಿಸಿದ್ದಾರೆ. ಇನ್ನು ಘಟನೆ ಸಂಬಂಧಿಸಿ ಬರ್ಕೆ ಠಾಣೆಗೆ  ಜಿತೇಂದ್ರ ಕೊಟ್ಟಾರಿ ದೂರು ನೀಡಿದ್ದಾರೆ. ದೂರು ಪಡೆದು ಎಫ್ಐಆರ್ ದಾಖಲಿಸಿ ಇಬ್ಬರು ಆರೋಪಿಗಳ ಬಂಧಿಸಲಾಗಿದೆ.