ಪುತ್ತೂರು : ಕಳೆದ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಹಿಂದೂ, ಹಿಂದೂ ಎನ್ನುವ ಕಾರಣಕ್ಕೆ ಬಿಜೆಪಿಗೆ ಸೋಲಾಯಿತು ಎನ್ನುವ ಬಿಜೆಪಿ ಮುಖಂಡ ಆರ್.ಅಶೋಕ್ ಹೇಳಿಕೆಗೆ ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಪ್ರತಿಕ್ರಿಯೆ ನೀಡಿದ್ದಾರೆ.
ಅಶೋಕ್ ಅವರು ಯಾರ ಬಗ್ಗೆ ಮಾತನಾಡಿದ್ದಾರೆ ಅನ್ನೋದನ್ನು ಅವರಲ್ಲೇ ಕೇಳಿಬೇಕು. ಆದರೆ ನಾನು ಕಳೆದ 35 ವರ್ಷಗಳಿಂದ ಧರ್ಮದ ವಿಚಾರದಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಧರ್ಮದ ವಿರುದ್ಧ ಕೆಲಸ ನಡೆದಾಗ, ಧಾರ್ಮಿಕ ಶ್ರದ್ಧಾಕೇಂದ್ರಗಳ ವಿರುದ್ಧ ಷಡ್ಯಂತ್ರ ನಡೆದಾಗ, ಹಿಂದೂಗಳ ಪೂಜ್ಯ ಗೋಮಾತೆಯ ಹತ್ಯೆಯ ವಿಚಾರ ಬಂದಾಗ, ಲವ್ ಜಿಹಾದ್ ಮೂಲಕ ಹಿಂದೂ ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ಮೂಲಕ ಮೋಸದ ಜಾಲದಲ್ಲಿ ಸಿಲುಕಿಸಿದಾಗ ಅದರ ವಿರುದ್ಧ ನಾನು ಧ್ವನಿ ಎತ್ತಿದ್ದೇನೆ, ಹೋರಾಟವನ್ನು ಮಾಡಿದ್ದೇನೆ.
ಅಲ್ಲದೆ ನನ್ನ ಜೀವನದ ಕೊನೆಯ ದಿನದ ತನಕ ಹಿಂದುತ್ವಕ್ಕಾಗಿ ಕೆಲಸ ಮಾಡುತ್ತೇನೆ ಎಂದ ಅವರು ಬೇರೆ ಅಪೇಕ್ಷೆಗಾಗಿ ಹಿಂದೆಯೂ ಕೆಲಸ ಮಾಡಿಲ್ಲ ಮುಂದೆಯೂ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಕಾರ್ಯಕರ್ತರ ಅಭಿಪ್ರಾಯದಂತೆ ಸಭೆ ನಡೆಸಿ ಚರ್ಚಿಸಲಾಗಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯತ್ ನ ಬೂತ್ ಮಟ್ಟದ ಆಕಾಂಕ್ಷಿಗಳಿಗೆ ಅವಕಾಶ ನೀಡಲಾಗುವುದು ಎಂದರು.

