ಮಂಗಳೂರು : 7 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ 13ಕ್ಕಿಂತ ಹೆಚ್ಚಿನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಾರಂಟ್ ಆರೋಪಿಯನ್ನ ಮಂಗಳೂರು ದಕ್ಷಿಣ ಉಪವಿಭಾಗದ ಪೊಲೀಸರು ಆಗಸ್ಟ್ 2 ರಂದು ಬಂಧಿಸಿದ್ದಾರೆ.

ಉಮ್ಮರ್ ನವಾಥ್ (33) ಬಂಧಿತ ಆರೋಪಿ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಮಾರ್ಗತಲೆ ನಿವಾಸಿಯಾಗಿರುವ ಈತ, ಪ್ರಸ್ತುತ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಪಾವೂರು ಪೋಸ್ಟ್ ವ್ಯಾಪ್ತಿಯ ಕುಂಡದ್ದು ಗೇರುಕಟ್ಟೆಯ ನಾಜಿಯಾ ಮಂಜೀಲ್ ನಲ್ಲಿ ವಾಸವಾಗಿದ್ದ.

ಆರೋಪಿ ಉಮ್ಮರ್ ನವಾಫ್ ಮೇಲೆ ಸುಮಾರು 13 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ನ್ಯಾಯಾಲಯವು ಈತನ ವಿರುದ್ಧ 30ಕ್ಕೂ ಹೆಚ್ಚು ವಾರಂಟ್‌ಗಳನ್ನು ಜಾರಿ ಮಾಡಲಾಗಿತ್ತು.

ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಂತೆ ಮಂಗಳೂರು ದಕ್ಷಿಣ ಉಪವಿಭಾಗ ಕಛೇರಿಯ ವಿಶೇಷ ಕರ್ತವ್ಯ ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಳು ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಉಮ್ಮರ್ ನವಾಥ್ ನನ್ನು ಆಗಸ್ಟ್ 02ರಂದು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್‌ ಪ್ರಕಟಣೆ ತಿಳಿಸಿದೆ.