ಮಂಗಳೂರು : ಧರ್ಮಸ್ಥಳಕ್ಕೆ ಕಳಂಕ ತರುವ ಯತ್ನವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ತೇಜೋವಧೆ ಮುಂದುವರೆದರೆ ಹಿಂದೂ ಸಮಾಜದೊಂದಿಗೆ ಹೋರಾಟ ನಡೆಸುವುದಾಗಿ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಎಚ್ಚರಿಸಿದ್ದಾರೆ.
ಎಸ್ಐಟಿ ತನಿಖೆಗೆ ಬೆಂಬಲವಿದ್ದು, ತನಿಖೆ ವೇಳೆ ಅವಹೇಳನ ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಅನಾಮಿಕನ ಮಂಪರು ಪರೀಕ್ಷೆ ನಡೆಸಲು ಆಗ್ರಹಿಸಿದ್ದು, ತೇಜೋವಧೆಯ ಹಿಂದೆ ಎಡಪಂಥೀಯರ ಷಡ್ಯಂತ್ರವಿದೆ ಎಂದು ಆರೋಪಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ”ಅನಾಮಿಕನ ದೂರಿನ ಮೇರೆಗೆ ನಡೆಯುತ್ತಿರುವ ವಿಶೇಷ ತನಿಖಾ ತಂಡದ ತನಿಖೆಗೆ ಬಿಜೆಪಿಯ ಸಂಪೂರ್ಣ ಬೆಂಬಲ ಇದೆ. ಆದರೆ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಎಡಪಂಥೀಯರ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ನಡೆಸುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ,” ಎಂದರು.
“ಧರ್ಮಸ್ಥಳದ ವಿರುದ್ಧ ಆರೋಪ ಬಂದಾಗ ಹಿಂದೆಯೂ ತನಿಖೆಯನ್ನು ಬಿಜೆಪಿ ಬೆಂಬಲಿಸಿತ್ತು. ಈ ಬಾರಿಯೂ ಎಸ್ಐಟಿ ತನಿಖೆಗೆ ಬೆಂಬಲ ವ್ಯಕ್ತಪಡಿಸುತ್ತದೆ. ಆದರೆ ಎಸ್ಐಟಿ ತನಿಖೆ ವೇಳೆ ಹೊರಗಿನವರು ಕ್ಷೇತ್ರದ ಬಗ್ಗೆ ಅವಹೇಳನ ಮಾಡುವುದನ್ನು ಎಷ್ಟು ಮಾತ್ರಕ್ಕೂ ಸಹಿಸಲು ಸಾಧ್ಯವಿಲ್ಲ,” ಎಂದರು.
“ಧರ್ಮಸ್ಥಳ ಗ್ರಾಮದಲ್ಲಿ ಅನಾಥ ಶವಗಳನ್ನು ಹೂಳಿದ್ದೇನೆ, ತನಿಖೆ ನಡೆಸಿ ಎನ್ನುವ ಅನಾಮಿಕ ವ್ಯಕ್ತಿ ಯಾರು ಎಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ತಿಂಗಳ ಹಿಂದೆ ನಿರ್ದಿಷ್ಟ ಸ್ಥಳಗಳಲ್ಲಿ ಅನಾಥ ಶವ ಹೂತಿದ್ದಾಗಿ ಹೇಳಿಕೆ ನೀಡಿದ್ದು, ಅದರಂತೆ ಎಸ್ಐಟಿ ಮಾರ್ಗದರ್ಶನದಲ್ಲಿ ಉತ್ಖನನ ನಡೆಯುತ್ತಿದೆ. ಆದರೆ ಆತನ ಆರೋಪದಲ್ಲಿ ಹುರುಳು ಇದ್ದಂತೆ ಕಾಣುತ್ತಿಲ್ಲ. ಆತ ಇನ್ನೂ 25 ಕಡೆ ಶವ ಹೂತಿದ್ದೇನೆ ಎಂದರೂ ತನಿಖೆ ನಡೆಸಲಿ, ಆದರೆ ಆತ ಯಾವ ಆಧಾರದಲ್ಲಿ ಆರೋಪ ಮಾಡುತ್ತಿದ್ದಾನೆ ಎಂಬುದು ಸ್ಪಷ್ಟವಾಗಬೇಕು. ಹೀಗಾಗಿ ಆತನ ಮಂಪರು ಪರೀಕ್ಷೆ ನಡೆಸಬೇಕು,” ಎಂದು ಆಗ್ರಹಿಸಿದರು.

