ಮಂಗಳೂರು: ಮತ್ತೊಂದು ಮಹತ್ವದ ಸಾರ್ವಜನಿಕ ಕಟ್ಟಡ ಉದ್ಘಾಟನೆಗೆ ಸಜ್ಜಾಗಿದೆ. ಭಾರತೀಯ ರೆಡ್ ಕ್ರಾಸ್ ಸೊಸೈಟಿ – ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ‘ಶತಮಾನೋತ್ಸವ ಭವನ’ ಜುಲೈ 26ರಂದು ಉದ್ಘಾಟನೆಗೊಳ್ಳಲಿದೆ.
ಮಂಗಳೂರು ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ, ಸುಮಾರು 6 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿತ ‘ಶತಮಾನೋತ್ಸವ ಭವನ’ ಉದ್ಘಾಟನಾ ಸಮಾರಂಭ ಜು.26ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.
ಈ ನೂತನ ಕಟ್ಟಡವನ್ನು ರಾಜ್ಯಪಾಲ ಥಾವರ್ಚಂದ್ ಗೆಹೋಟ್ ಅವರು ಉದ್ಘಾಟಿಸಲಿದ್ದಾರೆ. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಸಚಿವ ದಿನೇಶ್ ಗುಂಡೂರಾವ್, ಸಂಸದ ಬೃಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಮತ್ತು ಇತರ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಶತಮಾನೋತ್ಸವ ಭವನದ ವಿಶೇಷತೆಗಳು:
🏢 ಭವ್ಯ ಕಟ್ಟಡವು 4 ಅಂತಸ್ತುಗಳನ್ನು ಹೊಂದಿದ್ದು,
ನೆಲ ಅಂತಸ್ತಿನಲ್ಲಿ ಕಚೇರಿ, ಸಭಾಂಗಣ
1ನೇ ಮಹಡಿಯಲ್ಲಿ 300 ಆಸನದ ‘ಪ್ರೇರಣಾ’ ಸಭಾಂಗಣ
2ನೇ ಮಹಡಿಯಲ್ಲಿ 500 ಆಸನದ ‘ಸೀ ವ್ಯೂ’ ಸಭಾಂಗಣವಿದೆ.
ಈ ಕಟ್ಟಡ ಸಾರ್ವಜನಿಕ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು ಮತ್ತು ದಾನಿಗಳ ನೆರವಿನಿಂದ ನಿರ್ಮಾಣವಾಗಿದೆ.
ರೆಡ್ ಕ್ರಾಸ್ ಸೇವಾ ಹಿನ್ನಲೆ:
ದಕ್ಷಿಣ ಕನ್ನಡದ ರೆಡ್ ಕ್ರಾಸ್ ಘಟಕವು 7 ದಶಕಗಳ ಇತಿಹಾಸ ಹೊಂದಿದ್ದು, ರಕ್ತದಾನ ಶಿಬಿರ, ಪ್ರಥಮ ಚಿಕಿತ್ಸಾ ತರಬೇತಿ, ವಿಪತ್ತು ನಿರ್ವಹಣಾ ಕಾರ್ಯಾಗಾರಗಳು ಹಮ್ಮಿಕೊಳ್ಳಲಾಗುತ್ತಿದೆ.
ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಮೂಲಕ ಪ್ರತಿ ತಿಂಗಳು 500 ಯುನಿಟ್ ಉಚಿತ ರಕ್ತ ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯ ಮಾನವೀಯ ಚಟುವಟಿಕೆಗೆ ಕೇಂದ್ರವಾಗಲಿರುವ ಶತಮಾನೋತ್ಸವ ಭವನ, ರೆಡ್ ಕ್ರಾಸ್ ಸದಸ್ಯರ ಹೆಮ್ಮೆ ಮತ್ತು ಸಾರ್ವಜನಿಕ ಸೇವೆಯ ಪ್ರಮುಖ ಹಂತವಾಗಿದೆ.

