ಮಂಗಳೂರು: ಮಹಿಳಾಪರ ಕಾಳಜಿಯ ಖ್ಯಾತ ಕನ್ನಡ ಸಾಹಿತಿ ಶ್ರೀಮತಿ ಮನೋರಮಾ ಎಂ ಭಟ್ ಅವರ ಹೆಸರಿನಲ್ಲಿ ಅವರ ಮಕ್ಕಳಾದ ಶ್ರೀ ಜಯರಾಮ್ ಮುಳಿಯ ಮತ್ತು ಶ್ರೀ ಮಹೇಶ್ ಭಟ್ ಮುಳಿಯ ಅವರು ಸ್ಥಾಪಿಸಿದ ಈ ದತ್ತಿನಿಧಿಯನ್ನು ಪಿಯುಸಿಯಲ್ಲಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ, ಬಿ ಎ ಪದವಿ ಕಲಿಕೆಯಲ್ಲಿ ಕನ್ನಡ ಸಾಹಿತ್ಯವನ್ನು ವಿಶೇಷವಾಗಿ ಆರಿಸಿದ ವಿದ್ಯಾರ್ಥಿನಿಯರಿಗೆ ಪುರಸ್ಕಾರ ರೂಪದಲ್ಲಿ ನೀಡಲಾಗುತ್ತದೆ. ಕಳೆದ ಎರಡು ವರ್ಷಗಳಿಂದ ಇದರ ಪ್ರದಾನವು ನಡೆಯುತ್ತ ಬಂದಿದೆ.

ಸಾಹಿತ್ಯದ ಅಧ್ಯಯನವನ್ನು ಆರಿಸುವ ಮೂಲಕ ಶ್ರೀಮತಿ ಮನೋರಮಾ ಎಂ ಭಟ್ ಅವರ ಸಾಹಿತ್ಯಾಸಕ್ತಿ ಮತ್ತು ವಿಚಾರಪರ ಹೋರಾಟದ ಬೆಳಕುಗಳು ಮುಂದಿನ ತಲೆಮಾರಿನ ಹೆಣ್ಣುಮಕ್ಕಳಲ್ಲಿ ಮುಂದುವರಿಯಬೇಕು ಎಂಬ ಸದಾಶಯದಿಂದ ಈ ದತ್ತಿನಿಧಿಯನ್ನು ಸ್ಥಾಪಿಸಲಾಗಿದೆ. ವರುಷಕ್ಕೆ ಇಪ್ಪತ್ತು ಸಾವಿರದಂತೆ ಮೂರು ವರ್ಷಕ್ಕೆ ಒಟ್ಟು ಅರುವತ್ತು ಸಾವಿರ ರುಪಾಯಿಗಳನ್ನು ಈ ದತ್ತಿನಿಧಿಯು ಹೊಂದಿದೆ.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗವು ನೂರ ನಲುವತ್ತ ಆರು ವರ್ಷಗಳಷ್ಟು ಹಳೆಯದಾದುದು. ಶ್ರೀಮತಿ ಮನೋರಮಾ ಯಂ ಭಟ್ ಅವರ ಮಾವ ಶ್ರೀ ಮುಳಿಯ ತಿಮ್ಮಪ್ಪಯ್ಯನವರು ಪ್ರಾಧ್ಯಾಪಕರಾಗಿದ್ದು ವಿಭಾಗವನ್ನು ಕಟ್ಟಿದವರು. ಮನೋರಮಾ ಎಂ ಭಟ್ ನೆನಪಿನ ಪುರಸ್ಕಾರ ನಿಧಿಯನ್ನು ಪಡೆಯುವ ಈ ವರ್ಷದ ಅರ್ಹತೆಯು ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದ ಪ್ರಥಮ ಬಿ ಎ. ವಿದ್ಯಾರ್ಥಿನಿಯರಾದ ಸಕಲೇಶಪುರ ಮೂಲದ ಕು. ವರ್ಷಿಣಿ ಮತ್ತು ಕುಂದಾಪುರ ಮೂಲದ ಕು. ಸುಧೀಕ್ಷಾ ಇವರಿಗೆ ಸಂದಿದೆ.
ಪುರಸ್ಕಾರ ನಿಧಿಯ ಸ್ಥಾಪಕರಲ್ಲೊಬ್ಬರಾದ ಶ್ರೀ ಮಹೇಶ್ ಯಂ ಭಟ್, ಕನ್ನಡ ವಿಭಾಗ ಮುಖ್ಯಸ್ಥರಾದ ಡಾ ದಿನೇಶ್ ನಾಯಕ್, ಹಿರಿಯ ಕನ್ನಡ ಪ್ರಾಧ್ಯಾಪಕರಾದ ಡಾ ನರಸಿಂಹ ಮೂರ್ತಿ, ಡಾ ವಿಶ್ವನಾಥ ಬದಿಕಾನ ಮತ್ತು ಡಾ ಮಹಾಲಿಂಗ ಭಟ್ ಇವರು ಇದ್ದ ಸಮಿತಿಯು ಈ ಆಯ್ಕೆಯನ್ನು ನಡೆಸಿದೆ.

