ಮಂಗಳೂರು: “ಎಳೆಯ ಮಕ್ಕಳು ಪ್ರಥಮ ಹಂತದಲ್ಲಿ ಅಂಗನವಾಡಿಗೆ ಬರುತ್ತಾರೆ. ಅಲ್ಲಿ ನಮ್ಮ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಚಟುವಟಿಕೆಗಳನ್ನು ವೀಕ್ಷಿಸುತ್ತಾರೆ. ತರಬೇತಿಯನ್ನು ನೀಡುತ್ತಾರೆ. ಆದರೆ ಮಕ್ಕಳಲ್ಲಿ ವಿಭಿನ್ನವಾದ ವರ್ತನೆಗಳು ಕಂಡು ಬಂದಾಗ, ಯಾಕೆ ಹೀಗೆ? ಎಂಬ ಪ್ರಶ್ನೆ ಅಂಗನವಾಡಿ ಕಾರ್ಯಕರ್ತೆಯರಲ್ಲಿ ಮೂಡುತ್ತದೆ. ಆದುದರಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಆಟಿಸಂನ ಅರಿವು ಕೊಂಚವಾದರೂ ಇರಬೇಕು.

ಈ ಬಗ್ಗೆ ಶಕ್ತಿನಗರದಲ್ಲಿರುವ ಸಾನಿಧ್ಯ ಶಾಲೆ ಹಮ್ಮಿಕೊಂಡಿರುವ ಈ ಶಿಬಿರ ಬಹಳ ಮಹತ್ವವನ್ನು ಪಡೆದಿದೆ. ಮಂಗಳೂರು ನಗರ ವಲಯದ ಸುಮಾರು 50 ಮಂದಿ ಕಾರ್ಯಕರ್ತೆಯರು ಈ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮಂತರ ಪ್ರದೇಶದ ಕಾರ್ಯಕರ್ತೆಯರಿಗೂ ಈ ಶಿಬಿರವನ್ನು ಏರ್ಪಡಿಸಲು ಸಾನಿಧ್ಯದವರೊಂದಿಗೆ ಭಿನ್ನಹ ಮಾಡಿಕೊಳ್ಳುತ್ತೇನೆ”. ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಎ. ಉಸ್ಮಾನ್‌ರವರು ಹೇಳಿದರು.
ಅವರು ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿಧ್ಯ ವಸತಿಯುತ ಶಾಲೆ ಅಂತರಾಷ್ಟ್ರೀಯ ಆಟಿಸಂ ದಿನದಂದು ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಏರ್ಪಡಿಸಿದ್ದ ಆಟಿಸಂ ಬಗೆಗಿನ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಸಂದೇಶ ನೀಡಿದರು.

ಡಾ| ವಸಂತ್ ಕುಮಾರ್ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಗಣೇಶ ಸೇವಾ ಟ್ರಸ್ಟಿನ ಖಜಾಂಜಿ ಜಗದೀಶ್ ಶೆಟ್ಟಿ ನಿರ್ದೇಶಕರಾದ ಮೊಹಮ್ಮದ್ ಬಶೀರ್, ಸಲಹಾ ಸಮಿತಿ ಸದಸ್ಯರಾದ ಶ್ರೀ ಎರಿಕ್ ಜಾನ್ ಪಾಪ್ಟಿಸ್ಟ್ ಡಿಸೋಜಾ, ಸಂತೋಷ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಸಹಾಯಕ ಆಡಳಿತಾಧಿಕಾರಿ ಸುಮಾ ಡಿಸಿಲ್ವಾ ಕಾರ್ಯಕ್ರಮ ನಿರೂಪಿಸಿದರು. ವಿಶೇಷ ಶಿಕ್ಷಕಿಯರಾದ ಶ್ರೀಮತಿ ಜುಲಿಯಾನ ಸೋಫಿಯಾ ಡಿಸೋಜಾ, ಪ್ರಾಂಶುಪಾಲೆ ಮೀನಾಕ್ಷಿ ಎಂ.ಕೆ. ಹಾಗೂ ಡಾ| ವಸಂತ್ ಕುಮಾರ್ ಶೆಟ್ಟಿ, ಆಟಿಸಂನ ವಿವಿಧ ವಿಚಾರಗಳ ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.
ಸಮಾರೋಪ ಸಮಾರಂಭದಲ್ಲಿ ಶ್ರೀ ಗಣೇಶ ಸೇವಾ ಟ್ರಸ್ಟಿನ ಜೊತೆ ಕಾರ್ಯದರ್ಶಿ ಪ್ರೊಫೆಸರ್ ರಾಧಾಕೃಷ್ಣ ಸಂದೇಶ ನೀಡಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.

