ಮಂಗಳೂರು: ಮಂಗಳೂರಿನ ಸಂಗೀತ ಪ್ರಿಯರಿಗೆ ಒಂದು ಅಪರೂಪ ವಾದ್ಯ ಸಂಗೀತ ಕೇಳುವ ಸುಯೋಗ ಒದಗಿತ್ತು. ಅಂದು ಪುರಭವನದಲ್ಲಿ ಭರತಾಂಜಲಿ (ರಿ.) ಮಂಗಳೂರು ನಾಟ್ಯ ಸಂಸ್ಥೆಯ 31ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಜಲತರಂಗ ವಾದನ ಕಾರ್ಯಕ್ರಮವನ್ನು ಅ. 25 ರವಿವಾರ ಸಂಜೆ ಆಯೋಜಿಸಲಾಗಿತ್ತು.

ಭಾರತದ ಏಕೈಕ ಮಹಿಳಾ ಹಿಂದೂಸ್ತಾನಿ ಕಲಾವಿದೆ ವಿದುಷಿ ಶಶಿಕಲಾ ದಾನಿ ಮತ್ತು ಅವರ ಪುತ್ರ ಡಾ. ಸುಜ್ಞಾನ ದಾನಿ ಇವರು ಜಲತರಂಗ ಜುಗಲ್ ಬಂದಿ ಸಂಗೀತವನ್ನು ನುಡಿಸಿ ಪ್ರೇಕ್ಷಕರ ಮನ ತಣಿಸಿದರು.

ಜಲತರಂಗ ಜುಗಲ್ ಬಂದಿ ಶಾಸ್ತ್ರೀಯ ಸಂಗೀತ ಮಧುವಂತಿ ರಾಗದಲ್ಲಿ ಆಲಾಪ ನಂತರ ತೀನ್ ತಾಳದಲ್ಲಿ ಧ್ರುತ್ ನುಡಿಸಿ ಪಿಂಗಾಣಿ ಬಟ್ಟಲುಗಳ ಮೇಲೆ ಈರ್ವರೂ ಸುಮಧುರ ಸಂಗೀತದಲ್ಲಿ ತಮ್ಮ ಕೈಚಳಕ ತೋರಿಸಿದರು. ನಂತರ ಮಿಶ್ರ ಖಮಾಜ್ ದಲ್ಲಿ ಧುನ್ ಹಾಗೂ ಕೆಲ ಭಕ್ತಿ ಗೀತೆಗಳನ್ನು ನುಡಿಸಿದರು. ಇವರಿಗೆ ಶ್ರೀಮತಿ ಶ್ರೀಲತಾ ಪ್ರಭು ತಬಲಾದಲ್ಲಿ, ಶ್ರೀಮತಿ ವಂದನಾ ರಾಣಿ ತಂಬೂರಿಯಲ್ಲಿ, ಹಾಗೂ ಶ್ರೀ ಅರುಣ ದಾನಿ ಮಂಜೀರಾದಲ್ಲಿ ಸಮರ್ಥವಾಗಿ ಸಾಥ್ ನೀಡಿದರು.

ಆರಂಭದಲ್ಲಿ ಕಾರ್ಯಕ್ರಮವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಆಕಾಶವಾಣಿಯ ಎ ಶ್ರೇಣಿಯ ದೇಶದ ಏಕೈಕ ಮಹಿಳಾ ಜಲತರಂಗ ವಾದಕಿ ಎನಿಸಿರುವ ವಿದುಷಿ ಶಶಿಕಲಾ ದಾನಿಯವರನ್ನು ಭರತಾಂಜಲಿ ನಾಟ್ಯ ಸಂಸ್ಥೆಯವರು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಿದರು. ಮುಖ್ಯ ಅತಿಥಿಯಾಗಿ ಶ್ರೀ ಅಗರಿ ರಾಘವೇಂದ್ರ ರಾವ್ ಇವರು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಾಶಂಸನೆ ನೀಡಿದರು.
ನಾಟ್ಯ ಸಂಸ್ಥೆಯ ಗುರುಗಳಾದ ಶ್ರೀ ಶ್ರೀಧರ ಹೊಳ್ಳ ಎಲ್ಲರನ್ನು ಸ್ವಾಗತಿಸಿ ಸಂಸ್ಥೆಯ ಸಾಧನೆಗಳನ್ನು ವಿವರಿಸಿದರು. ಶ್ರೀಮತಿ ಪ್ರತಿಮಾ ಹೊಳ್ಳ ವಂದಿಸಿದರು. ತದನಂತರ ಭರತಾಂಜಲಿ (ರಿ.) ಕೊಟ್ಟಾರ ಮಂಗಳೂರು ವಿದ್ಯಾರ್ಥಿಗಳಿಂದ “ಜಲಾಂಜಲಿ ನೃತ್ಯಾಮೃತ” ಭರತನಾಟ್ಯ ಕಾರ್ಯಕ್ರಮ ನಡೆಯಿತು.

