ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಕಿನ್ನಿಮಜಲು ಕೆರೆ ಒಂದು ವರ್ಷದ ಅವಧಿಯಲ್ಲಿ ಮರುಜೀವ ಪಡೆದು ಕೃಷಿಗೆ ನೀರೊದಗಿಸುತ್ತಿದೆ. ಕೆರೆಯ ಪುನರುಜ್ಜೀವನಕ್ಕೆ ಪ್ರೇರಣೆ ನೀಡಿದ್ದು ಮಂಗಳೂರಿನ ಆಶಾ ಪ್ರಕಾಶ್ ಶೆಟ್ಟಿ ಅವರ ನೆರವು ಯೋಜನೆ.

ಬಿ.ಸಿ.ರಸ್ತೆಯಿಂದ ಪೊಳಲಿಗೆ ಸಾಗುವ ಹಾದಿಯಲ್ಲಿ ಅಮ್ಟಾಡಿ ಕಿನ್ನಿ ಮಜಲು ಕೆರೆ ಇದೆ. ಅರವತ್ತೆರಡು ಸೆಂಟ್ಸ್ ವಿಸ್ತೀರ್ಣದ ಈ ಕೆರೆಯನ್ನು ರೈತರು ನಮ್ಮ ಕೆರೆ ಎಂದು ಹೆಸರಿಟ್ಟು ಪುನಃಶ್ಚೇತನಗೊಳಿಸಿದ್ದಾರೆ. ಇದರ ಪರಿಣಾಮ ಕೆರೆಯಲ್ಲೀಗ ನೀರು ತುಂಬಿ ಸುತ್ತ ಹಸಿರು ನಳನಳಿಸುತ್ತಿದೆ.

ಕಿನ್ನಿ ಮಜಲು ಕೆರೆಯ ಭೂಮಿಯ ಮಾಲಕತ್ವ ಮಂಗಳೂರು ಬಿಶಪ್ ಅವರ ಹೆಸರಿನಲ್ಲಿದೆ. ಕೃಷಿಗೆ ಕೆರೆಯನ್ನು ಪುನಶ್ಚೇತನಗೊಳಿಸಲು ಮತ್ತು ಬಳಸಲು ಬಿಶಪ್ ಅವರು ಅನುಮತಿ ಪತ್ರವನ್ನು ನೀಡಿದ ಬಳಿಕ ಕೆರೆಯ ರೂಪ ಬದಲಾಯಿತು. ಒಂದು ವರ್ಷದ ಹಿಂದೆ ಇಲ್ಲಿ ಕೆರೆಯೊಂದಿದೆ ಎಂಬ ಕುರುಹೇ ಇಲ್ಲದಂತೆ ಆ ಪ್ರದೇಶ ಗಿಡ ಗಂಟಿಗಳಿಂದ ಆವೃತವಾಗಿತ್ತು. ಹೂಳು ತುಂಬಿ ನೀರು ಸಂಗ್ರಹ ಆಗುತ್ತಿರಲಿಲ್ಲ.

ಸುತ್ತ ಮುತ್ತಲಿನ ರೈತರು ಒಗ್ಗೂಡಿ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆಯ ನೆರವು ಕಾರ್ಯಕ್ರಮದಡಿ ಅರ್ಜಿ ಸಲ್ಲಿಸಿದರು. ಈಶ್ವರ್ ಶೆಟ್ಟಿ ಅವರ ಬೆಂಬಲದಿಂದ ಯೋಜನೆಯಲ್ಲಿ ಒಂದು ಲಕ್ಷ ರೂಪಾಯಿ ಮಂಜೂರಾಯಿತು. ಅದರಿಂದ ಪ್ರೇರಣೆ ಪಡೆದ ರೈತರು ಸ್ಥಳೀಯರಿಂದ ದೇಣಿಗೆ ಸಂಗ್ರಹಿಸಿ ಕೆರೆಯ ಪುನರುಜ್ಜೀವನ ಕಾರ್ಯ ಶುರು ಮಾಡಿದರು. ಸುತ್ತ ಮುತ್ತಲಿನವರು ಶ್ರಮದಾನ ಮಾಡಿದರು.ಕೆನರಾ ಇಂಜಿನಿಯರಿಂಗ್ ಕಾಲೇಜಿನ ಕೆಲ ವಿದ್ಯಾರ್ಥಿಗಳು ತಾಂತ್ರಿಕ ಸಹಕಾರ ನೀಡಿದರು. ದಿಶಾ ಸಂಸ್ಥೆ ನಿರ್ವಹಣೆಗೆ ಸಹಕಾರ ನೀಡಿತು.

ಇಲ್ಲಿಯ ರೈತರು ಪರಸ್ಪರ ಸಹಕಾರದಿಂದ ಒಂದಾಗಿ ಮಾಡಿರುವ ಈ ಸಾಧನೆಯಿಂದ ಕೆರೆಯಲ್ಲಿ ಹದಿನೈದು ಅಡಿಯಷ್ಟು ನೀರಿನ ಸಂಗ್ರಹವಿದೆ. ಕೆರೆಯ ಮಟ್ಟಕ್ಕಿಂತ ಕೆಳಗಿರುವ ಪ್ರದೇಶಕ್ಕೆ ನೀರು ಹರಿದು ಹೋಗುತ್ತಿದೆ. ಹೀಗೆ ಹರಿದು ಹೋಗುವ ನೀರಿನ ತೋಡಿಗೆ ಅಲ್ಲಲ್ಲಿ ಸಣ್ಣ ಕಟ್ಟಗಳನ್ನು ಕಟ್ಟಿ ಕೃಷಿಕರು ತಮ್ಮ ತೋಟಗಳಿಗೆ ನೀರು ಹಾಯಿಸುತ್ತಾರೆ. ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಇದರಿಂದ ಕೃಷಿಗೆ ನೀರೊದಗುತ್ತಿದೆ.

೨೦೨೩ರಲ್ಲಿ ಹಾಳು ಬಿದ್ದಿದ್ದ ಕುರುಹೇ ಇಲ್ಲದಂತಿದ್ದ ಕಿನ್ನಿಮಜಲು ಕೆರೆಯ ಪುನರುಜ್ಜೀವನ ಗ್ರಾಮದಲ್ಲಿ ಹಾಳು ಬಿದ್ದಿರುವ ಕೆರೆಗಳನ್ನು ಸಹಕಾರ ಮಾದರಿಯಲ್ಲಿ ಸಜೀವಗೊಳಿಸಬಹುದು ಎಂಬುದಕ್ಕೊಂದು ಮಾದರಿಯಂತಿದೆ. ಮಾರ್ಚ್ ನಲ್ಲಿಯೂ ನಮಗೆ ಈ ಬಾರಿ ತೋಟಕ್ಕೆ ನೀರಿನ ಕೊರತೆ ಬರಲಾರದು ಎನ್ನುತ್ತಾರೆ ಸ್ಥಳೀಯ ಕೃಷಿಕರಾದ ಮಾರ್ಕ್ ಬರೆಟ್ಟೊ. ಕೆರೆ ಪುನರುಜ್ಜೀವನದಲ್ಲಿ ಸ್ಥಳೀಯ ರೈತರನ್ನು ಸಂಘಟಿಸುವಲ್ಲಿ ಮತ್ತು ಶ್ರಮದಾನ ಕೈಗೊಳ್ಳುವಲ್ಲಿ ಬರೆಟ್ಟೋ ಕುಟುಂಬ ಮುಖ್ಯ ಪಾತ್ರವಹಿಸಿದೆ. ವಿದೇಶದಲ್ಲಿದ್ದ ಬರೆಟ್ಟೋ ಕುಟುಂಬದವರೂ ಕೆರೆ ಪುನರುಜ್ಜೀವನಕ್ಕೆ ನೆರವಿತ್ತಿದ್ದಾರೆ.

ಕೆರೆಯೊಂದು ಪುನರುಜ್ಜೀವನಗೊಂಡುದರಿಂದ ಸುತ್ತಮುತ್ತಲಿನ ಬಾವಿಗಳಲ್ಲಿ ಅಂತರ್ಜಲ ಪ್ರಮಾಣ ಏರಿಕೆಯಾಗಿದೆ. ಮುಂದಿನ ವರ್ಷ ಇನ್ನೂ ಹೆಚ್ಚು ನೀರು ಸಂಗ್ರಹಿಸಬಹುದು. ಈ ಬಾರಿ ತಡೆಗೋಡೆಯ ಸಾಮರ್ಥ್ಯ ಪರೀಕ್ಷಿಸುವುದಕ್ಕೆಂದು ಹೆಚ್ಚು ನೀರು ಕಟ್ಟಲಿಲ್ಲ ಎನ್ನುತ್ತಾರೆ ಬರೆಟ್ಟೋ. ಕೆರೆಯ ನೀರಿನ ಸಂಗ್ರಹದಿಂದ ಸುತ್ತಮುತ್ತಲ ಅಡಿಕೆ ತೋಟಗಳು ಈ ಬಾರಿ ಬೇಸಿಗೆಯಲ್ಲಿ ನೀರಿಲ್ಲದೆ ಸೊರಗುವುದು ತಪ್ಪುತ್ತದೆ. ನೀರೊಂದಿದ್ದರೆ, ಬೆಳೆಗೆ ರೋಗ ಬಾಧೆ ಇಲ್ಲದಿದ್ದರೆ ನಾವು ನೆಮ್ಮದಿಯಿಂದ ಇರಬಹುದು ಎನ್ನುತ್ತಾರೆ ಅವರು.