ಮಂಗಳೂರು: ರಾಜ್ಯ ಸರಕಾರವು ಚುನಾವಣಾ ಭರವಸೆಯಂತೆ ರೂ 6000/- ಮಾಸಿಕ ಗೌರವ ಧನ ವೇತನ ವನ್ಮು ನೀಡಬೇಕೆಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(ರಿ) CITU)ದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷೆ ಭವ್ಯರವರು ಒತ್ತಾಯಿಸಿದರು.

ಅವರು ಮಾ.5 ರಂದು ಮಂಗಳೂರು ತಾಲೂಕು ಪಂಚಾಯತ್ ಕಛೇರಿ ಮುಂದುಗಡೆ ನಡೆದ ಅಕ್ಷರ ದಾಸೋಹ ನೌಕರರ ಬ್ರಹತ್ ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅವರು ಮುಂದುವರಿದು, ಕಳೆದ ಆರು ವರ್ಷಗಳಿಂದ ಬಿಸಿಯೂಟ ನೌಕರರಿಗೆ ವೇತನ ಏರಿಕೆಯಾಗಿಲ್ಲ. ಕೇಂದ್ರ ಸರಕಾರವು 2014ರಿಂದ ಅನುದಾನವನ್ನು ಏರಿಕೆ ಮಾಡಲಿಲ್ಲ.

ಎರಡು ಸರಕಾರಗಳು ಬಿಸಿಯೂಟ ನೌಕರರನ್ನು ಶೋಷಣೆ ಮಾಡುತ್ತಾ ನೌಕರರನ್ನು ಹಿಂಸಿಸುತ್ತಿದೆ. ಎಲ್ಲಾ ಆಹಾರವಸ್ತುಗಳ ದರವನ್ನು ಏರಿಕೆ ಮಾಡಿದೆ. ಆದರೆ ಮಾಸಿಕ ವೇತನ ಏರಿಕೆಗಾಗಿ ಇಲಾಖೆಗೆ ಹಣವೇ ನೀಡುತ್ತಿಲ್ಲವೆಂದು ಅವರು ಆರೋಪಿಸಿದರು.

ಕೇರಳ, ಪಾಂಡಿಚೇರಿ,ಹರಿಯಾಣ, ತಮಿಳಾನಾಡಿನಂತೆ ರೂ, 7000/-ದಿಂದ 12000ವೇತನ ನೀಡಬೇಕೆಂದು ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿ ದರು. ರಾಜ್ಯ ಸರಕಾರವು ಈಗಾಗಲೇ ಒಪ್ಪಿಕೊಂಡಂತೆ ನಿವ್ರತ್ತಿಯಾದ ನೌಕರರಿಗೆ ಇಡಿಗಂಟು ನೀಡಲೇಬೇಕು ಎಂದರು.

ಬಿಸಿಯೂಟ ನೌಕರರಿಗೆ ಬೇಸಿಗೆ ಮತ್ತು ದಸರಾ ರಜೆಗಳ ವೇತನ ನೀಡಬೇಕು ಎಂದು ಸಂಘದ ಗೌರವ ಅಧ್ಯಕ್ಷರಾದ ಪದ್ಮಾವತಿ ಶೆಟ್ಟಿಯವರು ಹೇಳಿದರು. ಅವರು ಮುಂದುವರಿದು ಬಿಸಿಯೂಟ ಯೋಜನೆಯನ್ನು ಯಾವುದೆ ಖಾಸಗಿ ಸಂಸ್ಥೆಗಳಿಗೆ ಯಾವುದೇ ಸ್ವರೂಪದ ಜವಾಬ್ದಾರಿ ಕೊಡಬಾರದು ಮಾತ್ರವಲ್ಲದೆ ಹಾಜರಾತಿಯ ಆಧಾರದಲ್ಲಿಕೆಲಸದಿಂದ ತೆಗೆಯುವ ಕ್ರಮವನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.

ಪ್ರಾರಂಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಗಿರಿಜರವರು ಸ್ವಾಗತ ಭಾಷಣ ಮಾಡುತ್ತಾ ,ಕಾರ್ಯಕ್ರಮವನ್ನು ನಿರ್ವಹಿಸಿದರು. ರಾಜ್ಯದಾದ್ಯಂತ CITU ನೇತ್ರತ್ವದ ಬಿಸಿಯೂಟ ನೌಕರರ ಸಂಘವು 20 25 ಮಾರ್ಚ್ 4,5 ರಂದು ಬಿಸಿಯೂಟ ನೌಕರರು ಮುಷ್ಕರ ನಡೆಸಲು ಕರೆ ನೀಡಿರುವ ಹಿನ್ನಲೆಯಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.

ಪ್ರತಿಭಟನಾ ಪ್ರದರ್ಶನದ ನೇತ್ರತ್ವವನ್ನು ಸಂಘದ ಮುಂದಾಳುಗಳಾದ ಶಭಾನಾ ಭಾನು,ಹರಿವಣಿ,ಅನಿತಾ,ಉಮಾವತಿ, ಹರಿಣಾಕ್ಷಿ, ಮುಂತಾದವರು ವಹಿಸಿದ್ದರು. ಕೊನೆಯಲ್ಲಿ ಶಭಾನಾರವರು ಧನ್ಯವಾದ ನೀಡಿದರು.