ಮಂಗಳೂರು: ಗುಡ್ಡ ಕುಸಿತದಿಂದ ವಾಹನ ಸಂಪರ್ಕ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು-ಮಂಗಳೂರು ನಡುವೆ ಹೆಚ್ಚುವರಿ ರೈಲು ಸೇವೆಗೆ ಅನುಮತಿ ನೀಡಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.

ಹೆಚ್ಚುವರಿ ರೈಲು ಸೇವೆ ಕಲ್ಪಿಸುವಂತೆ ಮನವಿ ಮಾಡಿ ರೈಲ್ವೆ ಇಲಾಖೆಗೆ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಪತ್ರ ಬರೆದಿದ್ದರು. ಪತ್ರ ತಲುಪಿದ ಕೇವಲ ಒಂದು ಗಂಟೆಯಲ್ಲೇ ರೈಲ್ವೆ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಬೆಂಗಳೂರು-ಮಂಗಳೂರು ನಡುವೆ ಹೆಚ್ಚುವರಿ ರೈಲು ಆರಂಭಕ್ಕೆ ಅನುಮತಿ ನೀಡಿದೆ.

ಕರಾವಳಿ ಭಾಗದಲ್ಲಿ ಹಲವು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು.  ಈ ಹಿನ್ನೆಲೆಯಲ್ಲಿ ಬೆಂಗಳೂರು ನಡುವೆ ಹೆಚ್ಚುವರಿ ರೈಲು ಸೇವೆಯನ್ನು ತುರ್ತಾಗಿ ಪ್ರಾರಂಭಿಸುವಂತೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ನೈರುತ್ಯ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ವಿನಂತಿಸಿದ್ದರು.

ಸಂಸದರ ಪತ್ರ ತಲುಪಿದ ತಕ್ಷಣವೇ ರೈಲ್ವೆ ಇಲಾಖೆ ಸ್ಪಂದಿಸಿದೆ. ನಾಲ್ಕು ದಿನಗಳ ಕಾಲ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣಕ್ಕೆ ಹಾಗೂ ಮಂಗಳೂರು ಜಂಕ್ಷನ್‌ ರೈಲ್ವೆ ನಿಲ್ದಾಣದಿಂದ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ವಿಶೇಷ ರೈಲನ್ನು ನೀಡಿ ಆದೇಶ ಹೊರಡಿಸಿದೆ.

ವಿಶೇಷ ರೈಲುಗಳ ವಿವರ: ಜುಲೈ 19ರಂದು ರೈಲು ಸಂಖ್ಯೆ 06547 – ಎಸ್‌ಬಿಸಿ ಬೆಂಗಳೂರಿನಿಂದ ಹೊರಡಲಿದೆ. ಜು.20ರಂದು ರೈಲು ಸಂಖ್ಯೆ 06548 – ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ಬರಲಿದೆ. ಜು.21 ಹಾಗೂ 22ರಂದು ರೈಲು ಸಂಖ್ಯೆ 06549 – ಯಶವಂತಪುರದಿಂದ ಮಂಗಳೂರು ಜಂಕ್ಷನ್‌ಗೆ ತಲುಪಲಿದೆ. ಜು.21 ಹಾಗೂ 22ರಂದು ರೈಲು ಸಂಖ್ಯೆ 06550 – ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ಬರಲಿದೆ.