ಮಂಗಳೂರು : ಸಾಮಾಜಿಕ ಜಾಲತಾಣದಲ್ಲಿ ವೈಯುಕ್ತಿಕ ಸಮಸ್ಯೆಗಳನ್ನು ಪೂಜೆ ಮಾಡಿ ಪರಿಹರಿಸುವದಾಗಿ ಜಾಹೀರಾತು ನೀಡಿ ವ್ಯಕ್ತಿಯೊಬ್ಬರಿಂದ 24 ಲಕ್ಷ ಹಣ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ,
ಬಂಧಿತನನ್ನು ಬೆಂಗಳೂರು ನಿವಾಸಿ ವಾಸುದೇವ ಆರ್ ಎಂದು ಗುರುತಿಸಲಾಗಿದೆ. ಆರೋಪಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಾರ್ವಜನಿಕರಿಗೆ ವೈಯಕ್ತಿಕ ಸಮಸ್ಯೆಗಳನ್ನು ತತ್‌ಕ್ಷಣದಲ್ಲಿ ಪೂಜೆ ಮಾಡಿ ಪರಿಹರಿಸುವುದಾಗಿ ಜಾಹೀರಾತು ನೀಡಿ, ವ್ಯಕ್ತಿಯೊಬ್ಬರಿಗೆ ಸುಮಾರು 24,78,274/- ರೂ ಸೈಬರ್ ವಂಚನೆ ನಡೆಸಿದ್ದಾನೆ.
ಈ ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅ.ಕ್ರ. 87-2025, U/S 66(D) IT Act and 318(4) BNS ರಂತೆ ಪ್ರಕರಣ ದಾಖಲಾಗಿರುತ್ತದೆ. ಆರೋಪಿಯಿಂದ ಕೃತ್ಯಕ್ಕೆ ಬಳಸಿದ 4 ಮೊಬೈಲ್ ಫೋನ್‌ಗಳು ಹಾಗೂ ರೂ 20,300/- ನಗದು ಹಣವನ್ನು ಸ್ವಾಧೀನಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ 1,60,300/- ಆಗಿರುತ್ತದೆ. ಆರೋಪಿಯನ್ನು ನ. 05 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿರುತ್ತಾರೆ.

